ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ (PSI) ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೆ ಕಪಾಳಮೋಕ್ಷ ಹಾಗೂ ನಿಂದನೆ ಪ್ರಕರಣವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಆಯೋಗ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಂಡು ಸಂಪೂರ್ಣ ವರದಿ ನೀಡುವಂತೆ ಮಂಡ್ಯ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಮೇಲೆ ಶಾಸಕನೊಬ್ಬರ ಪುತ್ರಿ ಹಾಗೂ ಪ್ರಭಾವಿ ಕುಟುಂಬಕ್ಕೆ ಸೇರಿದ ಮಹಿಳೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ಮಾಧ್ಯಮಗಳ ಮೂಲಕ ಆಯೋಗದ ಗಮನಕ್ಕೆ ಬಂದಿದೆ. ಸಾರ್ವಜನಿಕ ಸೇವೆಯಲ್ಲಿರುವ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಈ ರೀತಿಯ ದೌರ್ಜನ್ಯ ಹಾಗೂ ಹಲ್ಲೆ ನಡೆದಿರುವುದು ಅತ್ಯಂತ ಖಂಡನೀಯ ಮತ್ತು ಗಂಭೀರ ಸ್ವರೂಪದ ಪ್ರಕರಣ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಮಹಿಳಾ ಅಧಿಕಾರಿಯ ಆತ್ಮಗೌರವ ಹಾಗೂ ಸುರಕ್ಷತೆಗೆ ಧಕ್ಕೆ ತರುವಂತಹ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸೂಚಿಸಿದ್ದಾರೆ.
ಈ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆಯೇ, ದಾಖಲಿಸಿದ್ದರೆ ಅದರ ಪ್ರತಿಯನ್ನು ಆಯೋಗಕ್ಕೆ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಆರೋಪಿಯ ವಿರುದ್ಧ ಯಾವೆಲ್ಲ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಆರೋಪಿಯ ಬಂಧನವಾಗಿದೆಯೇ ಹಾಗೂ ಈವರೆಗೆ ಕೈಗೊಂಡಿರುವ ಕಾನೂನು ಕ್ರಮಗಳ ಸಂಪೂರ್ಣ ವಿವರವನ್ನು ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದರ ಜೊತೆಗೆ ಹಲ್ಲೆಗೊಳಗಾದ ಮಹಿಳಾ ಪೊಲೀಸ್ ಅಧಿಕಾರಿಗೆ ನೀಡಿರುವ ರಕ್ಷಣೆ ಮತ್ತು ಪೊಲೀಸ್ ಇಲಾಖೆಯಿಂದ ಒದಗಿಸಿರುವ ಬೆಂಬಲದ ವಿವರಗಳನ್ನೂ ಸಲ್ಲಿಸುವಂತೆ ಆಯೋಗ ಕೇಳಿದೆ. ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯ ಸುರಕ್ಷತೆ ಮತ್ತು ಗೌರವಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಸೂಚಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಸಂಪೂರ್ಣ ತನಿಖಾ ಕ್ರಮಗಳ ವರದಿಯನ್ನು ಈ ಪತ್ರ ತಲುಪಿದ ಮೂರು ದಿನಗಳ ಒಳಗಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ಈ ಸಂಬಂಧ ಪತ್ರದ ಪ್ರತಿಯನ್ನು ಶ್ರೀರಂಗಪಟ್ಟಣದ ಕ್ಯಾತನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕೂಡ ಕಳುಹಿಸಲಾಗಿದೆ.
ಇದನ್ನೂ ಓದಿ : 80ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾದ ಮಾಣಿಕ್ ಷಾ ಪರೇಡ್ ಮೈದಾನ ; ವಿಧಾನಸೌಧದಲ್ಲಿ ಫ್ರೀಡಂ ಹಬ್ಬದ ಸಂಭ್ರಮ!



















