ಬೆಂಗಳೂರು: ಆಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಿದ್ದ ವಾಹನಗಳ ವಿರುದ್ಧ ಬೆಂಗಳೂರು ಸೌತ್ RTO ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ದಾಳಿಯಲ್ಲಿ 350ಕ್ಕೂ ಹೆಚ್ಚು ಆಪ್ ಆಧಾರಿತ ವಾಹನಗಳನ್ನು ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಲಾಗಿದೆ. ಕೆಲ ವಾಹನಗಳ ಇನ್ಷೂರೆನ್ಸ್ ರದ್ದುಪಡಿಸುವ ಕ್ರಮಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ.
ಬೆಂಗಳೂರು ಸೌತ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಓಮಕಾರೇಶ್ವರಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಆಪ್ ಮೂಲಕ ಗ್ರಾಹಕರನ್ನು ಪಿಕ್‌ಅಪ್ ಮತ್ತು ಡ್ರಾಪ್ ಮಾಡುತ್ತಿದ್ದ ವಾಹನಗಳ ಮೇಲೆ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿದ ಕೆಲ ವಾಹನ ಮಾಲೀಕರು ಸ್ಥಳದಲ್ಲೇ ಸಾವಿರಾರು ರೂಪಾಯಿ ದಂಡ ಪಾವತಿಸಿ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ. ಇನ್ನು ದಂಡ ಪಾವತಿಸಲು ನಿರಾಕರಿಸಿದ ಅಥವಾ ನಿಯಮಾನುಸಾರ ದಾಖಲೆಗಳನ್ನು ಹೊಂದಿರದ ಕೆಲವು ವಾಹನಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಯಾಕೆ ಈ ದಿಢೀರ್ ದಾಳಿ?
ನಾನ್-ಕಮರ್ಷಿಯಲ್ ವಾಹನಗಳಾಗಿ ನೋಂದಣಿಯಾಗಿರುವ ವೈಟ್ ಬೋರ್ಡ್ ವಾಹನಗಳನ್ನು ಆಪ್ ಆಧಾರಿತ ವಾಣಿಜ್ಯ ಸೇವೆಗೆ ಬಳಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ನಿಯಮದ ಪ್ರಕಾರ, ವಾಣಿಜ್ಯ ಉದ್ದೇಶದ ಪಿಕ್‌ಅಪ್–ಡ್ರಾಪ್ ಸೇವೆಗಳಿಗೆ ಕಮರ್ಷಿಯಲ್ ವಾಹನಗಳ ಯೆಲ್ಲೋ ಬೋರ್ಡ್ ಇರಬೇಕು. ಆದರೆ, ಕೆಲವರು ವೈಟ್ ಬೋರ್ಡ್ ಹೊಂದಿರುವ ನಾನ್-ಕಮರ್ಷಿಯಲ್ ವಾಹನಗಳನ್ನೇ ಆಪ್ ಆಧಾರಿತ ಸೇವೆಗೆ ಬಳಸುತ್ತಿರುವ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ RTO ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ದಂಡ, ಇನ್ಷೂರೆನ್ಸ್ ರದ್ದು ಹಾಗೂ ಅಗತ್ಯವಿದ್ದಲ್ಲಿ ಲೈಸೆನ್ಸ್ ರದ್ದುಪಡಿಸುವ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲೂ ಆಪ್ ಆಧಾರಿತ ವಾಹನಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ : ಬೆಂಗಳೂರು ಪೊಲೀಸರಿಂದ ಅಕ್ರಮ ಬಾಂಗ್ಲಾದೇಶ ವಲಸಿಗರ ಮೇಲೆ ದಾಳಿ


















