ಬೆಂಗಳೂರು : ಭಾರತ ಹಾಗೂ ಶ್ರೀಲಂಕಾ ನಡುವಿನ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದೇ ಹೊತ್ತಿನಲ್ಲಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಮಾಜಿ ನಾಯಕ ರೋಹಿತ್ ಶರ್ಮಾ ಅವರ ಮೈದಾನದೊಳಗಿನ ಸ್ವಾರಸ್ಯಕರ ಘಟನೆಯೊಂದನ್ನು ಸ್ಮರಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ತರಬೇತಿ ಶಿಬಿರದ ಫೋಟೋಗಳನ್ನು ಹಂಚಿಕೊಂಡಿರುವ ಜೈಸ್ವಾಲ್, ರೋಹಿತ್ ಶರ್ಮಾ ಅವರ ಪ್ರಸಿದ್ಧ ಸ್ಟಂಪ್ ಮೈಕ್ ಸಂಭಾಷಣೆಯನ್ನು ಅಡಿಬರಹವಾಗಿ ಬಳಸುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ತಾಲೀಮು ನಡೆಸುತ್ತಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಯಶಸ್ವಿ ಜೈಸ್ವಾಲ್, ಅದಕ್ಕೆ ನೀಡಿರುವ ಕ್ಯಾಪ್ಷನ್ ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. “ಏಕೆಂದರೆ ಒಮ್ಮೆ ಲೆಜೆಂಡ್ ಹೇಳಿದ್ದರು, ಬ್ಯಾಟರ್ ಆಡುವವರೆಗೂ ಎದ್ದು ನಿಲ್ಲುವಂತಿಲ್ಲ (ಜಬ್ ತಕ್ ಖೇಲೇಗಾ ನಹೀ, ತಬ್ ತಕ್ ಉಠ್ನೇಕಾ ನಹೀ)” ಎಂದು ಜೈಸ್ವಾಲ್ ಬರೆದುಕೊಂಡಿದ್ದಾರೆ. ಈ ಸಾಲುಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಆಸ್ಟ್ರೇಲಿಯಾ ಪ್ರವಾಸದ ಹಳೆಯ ನೆನಪುಗಳತ್ತ ಕೊಂಡೊಯ್ದಿದೆ.
ರೋಹಿತ್ ಶರ್ಮಾ ಗರಂ ಆಗಿದ್ದ ಆ ಹಳೆಯ ಘಟನೆ
ಜೈಸ್ವಾಲ್ ಅವರ ಈ ಸಾಲುಗಳು 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳೆ ನಡೆದ ಸ್ವಾರಸ್ಯಕರ ಪ್ರಸಂಗವೊಂದನ್ನು ನೆನಪಿಸುತ್ತವೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್, ಚೆಂಡನ್ನು ಆಡುವ ಮುನ್ನವೇ ಎದ್ದು ನಿಂತಿದ್ದರು.
ಇದನ್ನು ಗಮನಿಸಿದ ಅಂದಿನ ನಾಯಕ ರೋಹಿತ್ ಶರ್ಮಾ ತಕ್ಷಣವೇ ಜೈಸ್ವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. “ಏನೋ ಜಸ್ಸು, ಗಲ್ಲಿ ಕ್ರಿಕೆಟ್ ಆಡ್ತಾ ಇದ್ದೀಯಾ? ಕೆಳಗೆ ಕೂತ್ಕೋ, ಆತ ಆಡುವವರೆಗೂ ಎದ್ದೇಳಬೇಡ” ಎಂದು ಹಿಂದಿಯಲ್ಲಿ ಬೈದಿದ್ದರು. ಈ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿ ಅಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಇದೀಗ ಅದೇ ಘಟನೆಯನ್ನು ಮೆಲುಕು ಹಾಕುವ ಮೂಲಕ ಜೈಸ್ವಾಲ್ ತಮ್ಮ ನಾಯಕನೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ.
ಶ್ರೀಲಂಕಾ ಸರಣಿಯತ್ತ ಯಶಸ್ವಿ ಜೈಸ್ವಾಲ್ ಚಿತ್ತ
ಆಗಸ್ಟ್ 15ರಿಂದ ಗಾಲ್‌ನಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಕಣಕ್ಕಿಳಿಯಲಿದ್ದು, ಜೈಸ್ವಾಲ್ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ತಮ್ಮ ಕಿರು ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿರುವ ಜೈಸ್ವಾಲ್, ಇದುವರೆಗೆ ಆಡಿರುವ 29 ಟೆಸ್ಟ್ ಪಂದ್ಯಗಳಲ್ಲಿ 48.75ರ ಸರಾಸರಿಯಲ್ಲಿ 7 ಶತಕ ಹಾಗೂ 13 ಅರ್ಧಶತಕಗಳ ನೆರವಿನಿಂದ 2,535 ರನ್ ಕಲೆಹಾಕಿದ್ದಾರೆ. ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಲಯ ಕೊಂಚ ಕುಸಿದಿರುವುದು ಕಂಡುಬಂದಿದ್ದು, ಶ್ರೀಲಂಕಾ ವಿರುದ್ಧದ ಈ ಸರಣಿಯಲ್ಲಿ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳುವ ಮೂಲಕ ಟೀಮ್ ಇಂಡಿಯಾದ ಅಗ್ರ ಕ್ರಮಾಂಕವನ್ನು ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ : ಮೈಲಿಗಲ್ಲಿನ ಸನಿಹದಲ್ಲಿ ಸ್ಟಾರ್ಕ್ : ದಿಗ್ಗಜ ಕಪಿಲ್ ದೇವ್ ಟೆಸ್ಟ್ ವಿಕೆಟ್ ದಾಖಲೆ ಸರಿಗಟ್ಟಲು ಆಸೀಸ್ ವೇಗಿ ಸಜ್ಜು!



















