ದಕ್ಷಿಣ ಕನ್ನಡ : ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಉಮರ್ ಫಾರೂಕ್ ಎಂ.ಆರ್. ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.
ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎನ್‌ಐಎ ಅಧಿಕಾರಿಗಳ ತಂಡ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕೇರಳದ ಕೊಚ್ಚಿಯಲ್ಲಿ ಉಮರ್ ಫಾರೂಕ್‌ನನ್ನು ವಶಕ್ಕೆ ಪಡೆಯಲಾಗಿದೆ. ಈತನ ಬಂಧನದೊಂದಿಗೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದ ಆರೋಪಿಗಳ ಒಟ್ಟು ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಉಮರ್ ಫಾರೂಕ್ ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ ಉಮರ್ ಫಾರೂಕ್ ವಿರುದ್ಧ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ (RCN) ಹಾಗೂ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿಯಾಗಿತ್ತು. ಈತನ ಬಂಧನಕ್ಕೆ ನೆರವಾಗುವ ಸುಳಿವು ನೀಡಿದವರಿಗೆ ಎನ್‌ಐಎ 2 ಲಕ್ಷ ರೂಪಾಯಿ ಬಹುಮಾನವನ್ನು ಕೂಡ ಘೋಷಿಸಿತ್ತು.
ಉಮರ್ ಫಾರೂಕ್ ಮೇಲಿರುವ ಆರೋಪ ಏನು?
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಸುಳ್ಯ ಕಚೇರಿಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯ ಸಂಚು ಸಭೆಯಲ್ಲಿ ಉಮರ್ ಫಾರೂಕ್ ಇತರ ಆರೋಪಿಗಳೊಂದಿಗೆ ಸಕ್ರಿಯವಾಗಿ ಭಾಗವಹಿಸಿದ್ದ. ಹತ್ಯೆಗೂ ಮುನ್ನ ಬೆಳ್ಳಾರೆ ಗ್ರಾಮದಲ್ಲಿ ಪ್ರವೀಣ್ ಅವರ ಚಲನವಲನ ಗಮನಿಸಲು, ದಾಳಿ ನಡೆಸುವ ಸ್ಥಳ ಗುರುತಿಸಲು ಸಹ-ಆರೋಪಿಯೊಬ್ಬನಿಗೆ ಈತ ತನ್ನ ಬೈಕ್ ನೀಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಈ ಪ್ರಕರಣದ ಸಾಕ್ಷಿದಾರನ ಮೇಲೆ ಕೊಲೆ ಯತ್ನ ನಡೆಸಿದ ಸಚ ಸಂಚಿನಲ್ಲೂ ಈತ ಭಾಗಿಯಾಗಿದ್ದ ಎಂಬ ಗಂಭೀರ ಆರೋಪವಿದೆ.
ಇದನ್ನೂ ಓದಿ : ಮೋಜಿನ ಜೀವನಕ್ಕಾಗಿ ಅತ್ತೆಯನ್ನೇ ಕೊಲೆಗೈದ ವಿವಾಹಿತ ಮಹಿಳೆ, ಪ್ರಿಯಕರ ಬಂಧನ!



















