ಲಖನೌ : ಭಾರತೀಯ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಈ ದಂಪತಿಗಳು ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕೆಗಳನ್ನು ಮಾಡಿದ್ದರು. ಇದೀಗ ಈ ಟೀಕಾಕಾರರಿಗೆ ಶಮಿ ಖಡಕ್ ಉತ್ತರ ನೀಡುವ ಮೂಲಕ ಕೊಹ್ಲಿ ಮೇಲಿನ ತಮ್ಮ ಅಪಾರ ಗೌರವವನ್ನು ಪ್ರದರ್ಶಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಮೊಹಮ್ಮದ್ ಶಮಿ, ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಆಧ್ಯಾತ್ಮಿಕ ಭೇಟಿಯನ್ನು ಸಮರ್ಥಿಸಿಕೊಂಡರು. “ಅವರ ಆಧ್ಯಾತ್ಮಿಕ ಒಲವು ರಾತ್ರೋರಾತ್ರಿ ಹುಟ್ಟಿಕೊಂಡಿದ್ದಲ್ಲ. ಇದೊಂದು ಒಳ್ಳೆಯ ವಿಚಾರ. ವಿರಾಟ್ ತಾನು ನಂಬುವ ವಿಚಾರಗಳ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದಾರೆ ಮತ್ತು ಅದಕ್ಕಾಗಿ ಸಮಯ ಮೀಸಲಿಡುತ್ತಾರೆ. ಜೊತೆಗೆ ಆಯಾ ವ್ಯವಸ್ಥೆಯೊಳಗೇ ಶಿಸ್ತಿನಿಂದ ಬದುಕುತ್ತಾರೆ” ಎಂದು ಶಮಿ ಶ್ಲಾಘಿಸಿದರು.
ಅನುಷ್ಕಾ ಶರ್ಮಾ ಅವರು ಸನಾತನ ಧರ್ಮದ ಆಧ್ಯಾತ್ಮಿಕ ದೀಕ್ಷೆ ಪಡೆದಿದ್ದು, ಕೊರಳಲ್ಲಿ ತುಳಸಿ ಮಾಲೆ ಧರಿಸಿರುವುದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಮಾತನಾಡಿದ ಶಮಿ, “ಅವರೊಬ್ಬರು ವಿವಾಹಿತ ದಂಪತಿ. ಅವಳೇನಾದರೂ ಈ ರೀತಿ ದೀಕ್ಷೆ ಪಡೆದಿದ್ದರೂ ಅದರಲ್ಲಿ ಬೇರೆಯವರಿಗೆ ಏನು ಸಮಸ್ಯೆ? ನನಗಂತೂ ಇದು ಅರ್ಥವಾಗುತ್ತಿಲ್ಲ. ಒಬ್ಬರು ತಮಗೆ ನಂಬಿಕೆ ಇರುವ ವಿಚಾರಕ್ಕೆ ಆದ್ಯತೆ ನೀಡಿದರೆ ಯಾರೂ ಬೊಟ್ಟು ಮಾಡಿ ಆಕ್ಷೇಪ ವ್ಯಕ್ತಪಡಿಸುವ ಅಗತ್ಯವಿಲ್ಲ” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಕೊಹ್ಲಿ ಅತ್ಯಂತ ಮಾದರಿ ಹಾಗೂ ಶಿಸ್ತಿನ ವ್ಯಕ್ತಿ
ಮೈದಾನದ ಆಚೆಗೂ ವಿರಾಟ್ ಕೊಹ್ಲಿ ಅವರ ಜೀವನಶೈಲಿಯನ್ನು ಹತ್ತಿರದಿಂದ ಕಂಡಿರುವ ಶಮಿ, ವಿರಾಟ್ ಅವರನ್ನು ಅತ್ಯಂತ ಸಂಘಟಿತ ಹಾಗೂ ಶಿಸ್ತಿನ ಕ್ರೀಡಾಪಟು ಎಂದು ಬಣ್ಣಿಸಿದರು. “ಹೋಟೆಲ್ ಕೊಠಡಿಗಳಲ್ಲಿಯೂ ಕೊಹ್ಲಿ ಪ್ರತಿಯೊಂದು ವಸ್ತುಗಳನ್ನು ಅತ್ಯಂತ ಶಿಸ್ತಿನಿಂದ ಅದರದ್ದೇ ಆದ ಜಾಗದಲ್ಲಿ ಇಡುತ್ತಾರೆ. ಇದು ಅವರು ಪ್ರತಿಯೊಂದು ವಿಚಾರದಲ್ಲೂ ಎಷ್ಟು ನಿಖರತೆ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಶಮಿ ವಿವರಿಸಿದರು.
ಅಂದು ಶಮಿ ಬೆನ್ನಿಗೆ ನಿಂತಿದ್ದ ವಿರಾಟ್ ಕೊಹ್ಲಿ
2021 ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡವು ಸೋಲು ಕಂಡಾಗ, ಧರ್ಮದ ಆಧಾರದ ಮೇಲೆ ಮೊಹಮ್ಮದ್ ಶಮಿ ಅವರನ್ನು ತೀವ್ರವಾಗಿ ಗುರಿಯಾಗಿಸಲಾಗಿತ್ತು. ಆ ಕಠಿಣ ಪರಿಸ್ಥಿತಿಯಲ್ಲಿ ಅಂದಿನ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅವರು ಟೀಕಾಕಾರರ ವಿರುದ್ಧ ಗುಡುಗಿದ್ದರು. ಶಮಿ ಅವರ ಬೆನ್ನಿಗೆ ನಿಂತು, ಅವರೊಬ್ಬ ಶ್ರೇಷ್ಠ ಮ್ಯಾಚ್ ವಿನ್ನರ್ ಎಂದು ಸಮರ್ಥಿಸಿಕೊಂಡಿದ್ದರು. ಇದೀಗ ಕೊಹ್ಲಿ ಅವರ ವೈಯಕ್ತಿಕ ವಿಚಾರದ ಬಗ್ಗೆ ಟೀಕೆಗಳು ಎದುರಾದಾಗ, ಶಮಿ ಅದೇ ರೀತಿ ತಮ್ಮ ಮಾಜಿ ನಾಯಕನ ಬೆಂಬಲಕ್ಕೆ ನಿಂತಿರುವುದು ಇಬ್ಬರ ನಡುವಿನ ಅತ್ಯುತ್ತಮ ಬಾಂಧವ್ಯವನ್ನು ಪ್ರತಿಬಿಂಬಿಸುತ್ತಿದೆ.
ಕೊಹ್ಲಿ ನಾಯಕತ್ವದಲ್ಲಿ ಶಮಿ ಬೌಲಿಂಗ್ ಪರಾಕ್ರಮ
ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಭಾರತೀಯ ವೇಗದ ಬೌಲಿಂಗ್ ಪಡೆಯು ವಿಶ್ವದ ಅತ್ಯುತ್ತಮ ದಾಳಿಯಾಗಿ ರೂಪುಗೊಂಡಿತ್ತು. ಇದರಲ್ಲಿ ಶಮಿ ಅವರ ಪಾತ್ರ ಅನನ್ಯ. ಕೊಹ್ಲಿ ನಾಯಕತ್ವದಲ್ಲಿ 46 ಟೆಸ್ಟ್ ಪಂದ್ಯಗಳನ್ನು ಆಡಿರುವ ಶಮಿ ಬರೋಬ್ಬರಿ 168 ವಿಕೆಟ್‌ಗಳನ್ನು ಕಬಳಿಸಿದ್ದಾರೆ (ಅವರ ಒಟ್ಟು 229 ಟೆಸ್ಟ್ ವಿಕೆಟ್‌ಗಳಲ್ಲಿ). ಅದರಲ್ಲೂ 2018-19 ರ ಬಾರ್ಡರ್-ಗವಾಸ್ಕರ್ ಟ್ರೋಫಿಯ 4 ಪಂದ್ಯಗಳಲ್ಲಿ 26.18 ಸರಾಸರಿಯಲ್ಲಿ 16 ವಿಕೆಟ್‌ಗಳನ್ನು ಉರುಳಿಸಿ ಭಾರತದ ಐತಿಹಾಸಿಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಿರಾಟ್ ಕೊಹ್ಲಿ ಮುಂದಿನ ಸರಣಿ ಯಾವುದು?
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದಿದ್ದ ಕೊಹ್ಲಿ, 48.00 ರ ಸರಾಸರಿ ಹಾಗೂ 109.09 ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಎರಡು ಅರ್ಧಶತಕ ಸೇರಿದಂತೆ ಒಟ್ಟು 144 ರನ್ ಸಿಡಿಸಿ ಮಿಂಚಿದ್ದರು. ಇದಾದ ಬಳಿಕ, ಮುಂಬರುವ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ20 ಸರಣಿಯಲ್ಲಿ ಕೊಹ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಇದನ್ನೂ ಓದಿ : ವಿಕ್ರಂ ರವಿಚಂದ್ರನ್ ‘ಮುಧೋಳ್’ ಮಸ್ತಿ..!


















