ಬೆಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಕೆಎಸ್‌ಪಿಸಿಬಿ) ಸಾರ್ವಜನಿಕ ಸಂಪರ್ಕಾಧಿಕಾರಿ (PRO) ಹುದ್ದೆಗೆ ನಡೆದಿರುವ ಶಾಶ್ವತ ವಿಲೀನ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಮಗ್ರ ತನಿಖೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.

ಬಿಎಂಟಿಸಿ ಉದ್ಯೋಗಿಯಾಗಿರುವ ಮುನಿರಾಜು ಟಿ. ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ಶಾಶ್ವತವಾಗಿ ವಿಲೀನಗೊಳಿಸುವ ವೇಳೆ ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ–1974, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೃಂದ ಮತ್ತು ನೇಮಕಾತಿ ನಿಯಮಾವಳಿ–1992, ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು–1977, ಕೆಎಸ್‌ಆರ್‌ಟಿಸಿ ನೇಮಕಾತಿ ನಿಯಮಗಳು–1982 ಸೇರಿದಂತೆ ಹಲವು ಕಾನೂನು ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸಲಾಗಿದೆ.

ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಪಡೆದ ದಾಖಲೆಗಳು, ಕಡತ ಟಿಪ್ಪಣಿಗಳು ಹಾಗೂ ಸರ್ಕಾರದ ಆದೇಶಗಳ ಪರಿಶೀಲನೆಯಿಂದ, ಈ ಶಾಶ್ವತ ವಿಲೀನ ಪ್ರಕ್ರಿಯೆ ಕಾನೂನುಬದ್ಧ ಅಧಿಕಾರದ ವ್ಯಾಪ್ತಿಯನ್ನು ಮೀರಿ ಹಾಗೂ ಪೂರ್ವನಿಯೋಜಿತ ಉದ್ದೇಶದಿಂದ ನಡೆಸಲಾಗಿದೆ ಎಂಬ ಗಂಭೀರ ಅನುಮಾನಗಳು ವ್ಯಕ್ತವಾಗಿವೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

1992ರ ನೇಮಕಾತಿ ನಿಯಮಾವಳಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ನೇರ ನೇಮಕಾತಿ ಹಾಗೂ ಬಡ್ತಿ ಮಾತ್ರ ಅವಕಾಶವಿದ್ದರೂ, ನಂತರ “Absorption” (ಶಾಶ್ವತ ವಿಲೀನ) ವಿಧಾನವನ್ನು ಸೇರಿಸಿ ಒಬ್ಬ ವ್ಯಕ್ತಿಗೆ ಅನುಕೂಲವಾಗುವಂತೆ ನಿಯಮ ತಿದ್ದುಪಡಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಅಧಿಸೂಚನೆ, ಅರ್ಜಿ ಆಹ್ವಾನ, ಸ್ಪರ್ಧಾತ್ಮಕ ಆಯ್ಕೆ, ಮೀಸಲಾತಿ ರೋಸ್ಟರ್ ಸೇರಿದಂತೆ ಕಡ್ಡಾಯ ಪ್ರಕ್ರಿಯೆಗಳನ್ನು ಪಾಲಿಸದೇ ನೇಮಕಾತಿ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಆಗಿನ ಸಚಿವರ ಸೂಚನೆಯ ಬಳಿಕವೇ ನಿಯೋಜನೆ, ನಿಯಮ ತಿದ್ದುಪಡಿ, ಸರ್ಕಾರದ ಅನುಮೋದನೆ ಹಾಗೂ ಅಂತಿಮವಾಗಿ ಶಾಶ್ವತ ವಿಲೀನದ ಕ್ರಮಗಳು ನಡೆದಿವೆ. ಇದರಿಂದ ರಾಜಕೀಯ ಪ್ರಭಾವ, ಅಧಿಕಾರ ದುರುಪಯೋಗ, ಕಡತ ಟಿಪ್ಪಣಿಗಳ ತಿರುಚುವಿಕೆ ಹಾಗೂ ಕಾನೂನು ಇಲಾಖೆಯ ಅಭಿಪ್ರಾಯ ನಿರ್ಲಕ್ಷ್ಯಗೊಂಡಿರುವ ಅನುಮಾನಗಳು ಮೂಡಿವೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ, ಬಿಎಂಟಿಸಿ ದಾಖಲೆಗಳಲ್ಲಿ ಬೇರೆ ಸ್ವಾಯತ್ತ ಸಂಸ್ಥೆಗೆ ಶಾಶ್ವತ ವಿಲೀನಕ್ಕೆ ಅವಕಾಶವಿಲ್ಲ ಎಂದು ಆರಂಭಿಕ ಅಭಿಪ್ರಾಯ ದಾಖಲಿಸಿದ್ದರೂ, ನಂತರದ ಕಡತಗಳಲ್ಲಿ ಆ ಅಭಿಪ್ರಾಯವನ್ನು ಮರೆಮಾಚಿ ಅನುಮೋದನೆ ಪಡೆಯಲಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 25-02-2022ರ ನೇಮಕಾತಿ ನಿಯಮ ತಿದ್ದುಪಡಿ, ಸರ್ಕಾರದ ಅನುಮೋದನೆ, ಬಿಎಂಟಿಸಿ ಬಿಡುಗಡೆ ಆದೇಶ ಹಾಗೂ 04-02-2023ರಂದು ಹೊರಡಿಸಲಾದ ಶಾಶ್ವತ ವಿಲೀನ ಆದೇಶವನ್ನು ರದ್ದುಪಡಿಸಬೇಕು. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ, ಕ್ರಿಮಿನಲ್ ಪ್ರಕರಣ ಹಾಗೂ ಭ್ರಷ್ಟಾಚಾರ ಸಂಬಂಧಿತ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಪ್ರಕರಣವನ್ನು ಸಾಮಾನ್ಯ ಇಲಾಖಾ ತನಿಖೆಗೆ ಸೀಮಿತಗೊಳಿಸದೆ, ಸ್ವತಂತ್ರ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಿ, ಕಾನೂನುಬಾಹಿರ ನೇಮಕಾತಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪ್ರಧಾನಿ ವಿಡಿಯೋ ತಡೆಹಿಡಿದ ಮೆಟಾಗೆ ಸಂಸದೀಯ ಸಮಿತಿ ಗಡುವು : ಕ್ಷಮೆಯಾಚಿಸದಿದ್ದರೆ ರಕ್ಷಣೆ ರದ್ದು!



















