ಮುಂಬೈ : ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಕಂಗನಾ ರಣಾವತ್ ನಡುವಿನ ಹಳೆಯ ವೈಷಮ್ಯ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹೊಸ ಟ್ರೆಂಡ್ ಒಂದಕ್ಕೆ ಹೃತಿಕ್ ರೋಷನ್ ನೀಡಿರುವ ಪ್ರತಿಕ್ರಿಯೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಂಗನಾ, “ಉರಿಯುವ ಬೆಂಕಿಗೆ ತುಪ್ಪ ಸುರಿಯುವುದನ್ನು ನಿಲ್ಲಿಸಿ ಹಾಗೂ ಅನಗತ್ಯ ಹೇಳಿಕೆಗಳನ್ನು ನೀಡಬೇಡಿ” ಎಂದು ಹೃತಿಕ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಬರಹಗಾರ ಫ್ರೆಡ್ಡಿ ಬರ್ಡಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ “ವಿಶ್ವವೇ ಹೃತಿಕ್ ರೋಷನ್‌ಗೆ ಕ್ಷಮೆಯಾಚಿಸಬೇಕು” ಎಂಬ ಪೋಸ್ಟ್ ಹಂಚಿಕೊಂಡಿದ್ದೇ ಈ ಹೊಸ ವಿವಾದಕ್ಕೆ ಕಾರಣ. ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಹೃತಿಕ್, “ಯಾರನ್ನೋ ಇಷ್ಟಪಡುವುದಿಲ್ಲ ಎಂಬ ಕಾರಣಕ್ಕೆ ಮತ್ತೊಬ್ಬರ ಪರ ನಿಲ್ಲುವುದು ಸಮಾಜಕ್ಕೆ ಹಿಡಿದ ಕನ್ನಡಿ. ನಾನು ನೈಜ ಸತ್ಯಗಳು ಹೊರಬರುವವರೆಗೆ ಕಾಯುತ್ತೇನೆ” ಎಂದು ಬರೆದುಕೊಂಡಿದ್ದರು. ಹೃತಿಕ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅದು ಕಂಗನಾ ರಣಾವತ್ ಅವರನ್ನು ಉದ್ದೇಶಿಸಿಯೇ ಮಾಡಿದ್ದು ಎಂದು ಜಾಲತಾಣಗಳಲ್ಲಿ ಚರ್ಚೆ ಶುರುವಾಗಿತ್ತು.
ಇನ್‌ಸ್ಟಾಗ್ರಾಮ್‌ನಲ್ಲಿ ಕಂಗನಾ ತಿರುಗೇಟು
ಹೃತಿಕ್ ಪೋಸ್ಟ್‌ಗೆ ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮೂಲಕ ತಿರುಗೇಟು ನೀಡಿದ್ದಾರೆ. ಹೃತಿಕ್ ಮತ್ತು ಸಬಾ ಆಜಾದ್ ಜೋಡಿಗೆ ಶುಭ ಹಾರೈಸುತ್ತಲೇ ಆಕ್ರೋಶ ಹೊರಹಾಕಿರುವ ಕಂಗನಾ, “ನೀವು ಸಬಾ ಆಜಾದ್ ಜೊತೆ ಸಂತೋಷವಾಗಿದ್ದೀರಿ, ಈ ರೀತಿಯ ಸಮಯದಲ್ಲಿ ಮತ್ತೊಬ್ಬ ಮಹಿಳೆಯನ್ನು ಚೇಷ್ಟೆ ಮಾಡುವುದು ನಿಮಗೆ ಶೋಭೆ ತರುವುದಿಲ್ಲ. ನಿಮ್ಮ ಹೆಸರು ಬಳಸಿ ನನ್ನನ್ನು ಸೈಬರ್ ಬುಲ್ಲಿಂಗ್ ಮಾಡುತ್ತಿರುವವರನ್ನು ಖಂಡಿಸುವ ಬದಲು, ನೀವೇ ಬೆಂಕಿಗೆ ತುಪ್ಪ ಸುರಿಯುತ್ತಿದ್ದೀರಿ. ನಿಮ್ಮ ಸಂಗಾತಿಗೆ ಮುಜುಗರ ತರುವುದನ್ನು ನಿಲ್ಲಿಸಿ, ನಿನಗೆ ಒಳ್ಳೆಯ ಬುದ್ಧಿ ಬರಲಿ” ಎಂದು ಬರೆದುಕೊಂಡಿದ್ದಾರೆ.
ವಿವಾದದ ಹಿನ್ನೆಲೆ ಮತ್ತು ಹಳೆಯ ವೈಷಮ್ಯ
ಇತ್ತೀಚೆಗೆ ಸಿಜೆಪಿ (CJP) ವಕ್ತಾರ ಸೌರವ್ ದಾಸ್ ಮತ್ತು ಕಂಗನಾ ನಡುವೆ ನಡೆದ ಜಟಾಪಟಿಯ ವೇಳೆ, ಸೌರವ್ ಅವರು ತಮಾಷೆಯಾಗಿ “ನಾನು ನೋಡಲು ಹೃತಿಕ್ ರೋಷನ್ ಥರ ಕಾಣಿಸುವುದಕ್ಕೆ ಕಂಗನಾ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಮೀಮ್ಸ್‌ಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕಂಗನಾರನ್ನು ಕಾಲೆಳೆಯುವ ಮೀಮ್ ಒಂದಕ್ಕೆ ಹೃತಿಕ್ ‘ಲೈಕ್’ ಒತ್ತಿದ್ದಾರೆ ಎಂಬ ವದಂತಿಯೂ ಹರಡಿ ವಿವಾದ ಮತ್ತಷ್ಟು ದೊಡ್ಡದಾಯಿತು.
2016ರಲ್ಲಿ ಕಂಗನಾ ರಣಾವತ್ ಅವರು ಹೃತಿಕ್ ಅವರನ್ನು ‘ಸಿಲ್ಲಿ ಎಕ್ಸ್’ ಎಂದು ಕರೆದಿದ್ದರಿಂದ ಆರಂಭವಾದ ಈ ಕಾನೂನು ಮತ್ತು ವೈಯಕ್ತಿಕ ಸಮರ, ಸುಮಾರು ಒಂದು ದಶಕದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೂಪ ಪಡೆದುಕೊಂಡು ಮುಂದುವರಿಯುತ್ತಲೇ ಇದೆ.
ಇದನ್ನೂ ಓದಿ : ಭಾರತವನ್ನು ಪ್ರೀತಿಸುವುದಾದರೆ ದುಬೈನಲ್ಲೇಕೆ ವಾಸಿಸುವಿರಿ? ವಿವೇಕ್ ಒಬೆರಾಯ್, ಮಾಧವನ್‌ಗೆ ರಾಜ್ ಠಾಕ್ರೆ ಪ್ರಶ್ನೆ!



















