ಉಡುಪಿ\ಕುಂದಾಪುರ : ದುಷ್ಕರ್ಮಿಯೋರ್ವ ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಕುಂದಾಪುರದ ಹೋಲಿ ರೋಸರಿ ಚರ್ಚ್ ಎದುರಿನ ರಸ್ತೆಯಲ್ಲಿ ನಡೆದಿದೆ.
ಬಾರ್ಕೂರು-ಕಳ್ಳೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಗುಂಡೇಟಿಗೆ ಬಲಿಯಾದವರು ಎಂದು ತಿಳಿದುಬಂದಿದೆ. ಐವನ್ ರಿಚರ್ಡ್ ಅವರು ಕೆಲವು ವ್ಯವಹಾರಗಳನ್ನು ನಡೆಸುತ್ತಿದ್ದು, ತಮ್ಮ ಮೊದಲ ಪತ್ನಿಯನ್ನು ತೊರೆದು, ಬಾರ್ಕೂರು ಮೂಲದ ಮಹಿಳೆಯೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.

ಇಂದು ಮುಂಜಾನೆ 3.30ರ ಸುಮಾರಿಗೆ ಮಹಿಳೆಯೊಂದಿಗೆ ಕಾರಿನಲ್ಲಿ ಕುಂದಾಪುರದ ಚರ್ಚ್ ರಸ್ತೆಗೆ ಬಂದಿದ್ದ ವೇಳೆ ಅಪರಿಚಿತ ವ್ಯಕ್ತಿ ಗನ್‌ನಿಂದ ಐವನ್ ಅವರ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗುಂಡೇಟಿನಿಂದ ತೀವ್ರ ರಕ್ತಸ್ರಾವಗೊಂಡ ಐವನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಜೊತೆಯಲ್ಲಿದ್ದ ಮಹಿಳೆ ಆರೋಪಿಯನ್ನು ಗುರುತಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇನ್ನು, ಐವನ್ ಅವರ ಕೊಲೆಗೆ ಹಣಕಾಸಿನ ವ್ಯವಹಾರ ಅಥವಾ ಇತರ ವ್ಯವಹಾರಿಕ ವಿಚಾರ ಕಾರಣವಾಗಿರಬಹುದು ಎಂಬ ಶಂಕೆ ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆ ಇನ್ಸ್‌ಪೆಕ್ಟರ್ ಜಯರಾಮ ಗೌಡ ಹಾಗೂ ಪಿಎಸ್‌ಐಗಳಾದ ನಂಜಾ ನಾಯ್ಕ ಪುಷ್ಪಾ ಅನೂಪ್ ನಾಯಕ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೋಕೋ ತಂಡವೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದೆ. ಘಟನಾ ಕುರಿತು ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ಭುಗಿಲೆದ್ದ ಕಾವೇರಿ ಕಿಚ್ಚು : ಇಂದು ಬಿಜೆಪಿಯಿಂದ KRSಗೆ ಮುತ್ತಿಗೆ.. ಪೊಲೀಸರಿಂದ ಬಿಗಿ ಭದ್ರತೆ!



















