ಚಿಕ್ಕಮಗಳೂರು : ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಸಿ.ಟಿ ರವಿ ಅವರಿಗೆ ಪೊಲೀಸರು ನೋಟಿಸ್ ನೀಡಲು ಮನೆಗೆ ತೆರಳಿದ್ದಾಗ ಭಾರೀ ಹೈಡ್ರಾಮಾ ನಡೆದಿದೆ.
ಚಿಕ್ಕಮಗಳೂರು ನಗರ ಠಾಣೆಯ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಅವರು ಸಿಟಿ ರವಿ ಅವರ ಮನೆಗೆ ನೋಟಿಸ್ ನೀಡಲು ಬಂದ ವೇಳೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಅವರು ಸಿಟಿ ರವಿ ಅವರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ. ಆದ್ರೆ, ಸಿಟಿ ರವಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದು, ಬಳಿಕ 27ರಂದು 11 ಗಂಟೆಗೆ ತನಿಖೆಗೆ ಬರುವಂತೆ ನೋಟಿಸ್ ಅನ್ನು ಮನೆಯ ಗೋಡೆಗೆ ಅಂಟಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು, ನೋಟಿಸ್ ಕಿತ್ತೆಸೆದು ಪೊಲೀಸರಿಗೆ ಧಿಕ್ಕಾರ ಕೂಗಿದ್ದಾರೆ.

ಈ ವೇಳೆ ಮಾತನಾಡಿದ ಸಿ.ಟಿ ರವಿಯವರು, ವಿದ್ಯಾರ್ಥಿಗಳ ಹೋರಾಟದ ಹೆಸರಿನಲ್ಲಿ ಜೀಪಿನ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಲು ಹೋದ ಮುಲ್ಲಾನನ ಬಗ್ಗೆ ನಾನು ಮಾತನಾಡಿದ್ದೇನೆ ಹೊರತು ಮುಸಲ್ಮಾನರ ಬಗ್ಗೆ ಮಾತನಾಡಿಲ್ಲ. ಅವನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ? ಎಂದು ವಿಡಿಯೋ ತೋರಿಸಿ ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಯಾರೇ ದೂರು ನೀಡಿದರೂ ತಕ್ಷಣ ಎಫ್‌ಐಆರ್ ದಾಖಲಿಸಿ ಬಂಧನ ಮಾಡುತ್ತೀರಾ? ದೂರು ನೀಡಿದವರು ಯಾರು, ದೂರಿನ ಸ್ವರೂಪ ಏನು ಎಂಬುದನ್ನು ಪರಿಶೀಲಿಸಬೇಕಲ್ಲವೇ? ನನ್ನ ಭಾಷಣದಲ್ಲಿ ‘ಧರ್ಮ’ ಎಂಬ ಪದವೇ ಇಲ್ಲ. ‘ಮುಲ್ಲಾ’ ಎಂದರೆ ‘ಮುಸ್ಲಿಂ’ ಎಂಬ ಅರ್ಥವೇ? ಬೆಂಕಿ ಹಚ್ಚಲು ಬಂದ ವ್ಯಕ್ತಿಯನ್ನು ಉಲ್ಲೇಖಿಸಿ ಮಾತನಾಡಿದ್ದೇನೆ. ನಾಳೆಯೂ ಅದನ್ನೇ ಹೇಳುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.
ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, “ನಾವು ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ದೂರು ನೀಡಿದ್ದೇವೆ. ಆ ಪ್ರಕರಣದಲ್ಲಿ ಎಷ್ಟು ಕ್ರಮ ಕೈಗೊಂಡಿದ್ದೀರಿ? ನಮ್ಮ ದೂರಿನ ಬಗ್ಗೆ ಏನು ಕ್ರಮವಾಗಿದೆ?” ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್, ನೋಟಿಸ್ ನೀಡಲು ಬಂದಿದ್ದೇವೆ, ನಾವು ಬಂಧನ ಮಾಡಲು ಬಂದಿಲ್ಲ. ತನಿಖೆ ಮಾಡುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ.
ಆದರೂ ಸುಮ್ಮನಾಗದ ಕಾರ್ಯಕರ್ತರು, ಪೊಲೀಸರನ್ನು ಸುತ್ತುವರೆದು ಪ್ರತಿಭಟನೆ ಮಾಡುತ್ತ ಧಿಕ್ಕಾರ ಕೂಗಿದ್ದಾರೆ. ಅಲ್ಲದೇ ಅಂಟಿಸಿದ ನೋಟಿಸ್‌ನ್ನು ಕಾರ್ಯಕರ್ತರು ಕಿತ್ತು ಹಾಕಿದ್ದಾರೆ. ಇದರಿಂದ ಕೋಪಗೊಂಡ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್, ಇಲ್ಲಿಯವರೆಗೆ ಯಾರು ಈ ತರಹ ಮಾಡಿಲ್ಲ. ಇದು ತಪ್ಪು. ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದೀರಿ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : 7 ತಿಂಗಳ ಹಸುಗೂಸಿನ ಮುಂದೆಯೇ ತಾಯಿ ಆತ್ಮಹತ್ಯೆ!



















