ಬೆಂಗಳೂರು : ಯಡಿಯೂರು ಕೆರೆ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್.ಆರ್. ರಮೇಶ್ ಅವರು ರಚಿಸಿರುವ “ಲೀಲಮ್ಮ… ನಿನ್ನ ಗಂಡ ಯಾರಮ್ಮ..?” ಎಂಬ ಕೃತಿ ಲೋಕಾರ್ಪಣೆ ಮಾಡಲಾಯಿತು.
ಈ ಕೃತಿಯನ್ನು ಪ್ರಸಿದ್ಧ ಪ್ರಕಾಶನ ಸಂಸ್ಥೆ ‘ಸ್ನೇಹ ಪ್ರಕಾಶನ’ ಮುದ್ರಿಸಿದ್ದು, ದಿವಂಗತ ನಟಿ ಲೀಲಾವತಿಯವರ ಜೀವನದ ಇತಿಹಾಸ, ಹಿರಿಯ ನಟ ಹಾಗೂ ಸಂಸ್ಕೃತ ಶಿರೋಮಣಿ ದಿವಂಗತ ಮಹಾಲಿಂಗ ಭಾಗವತರ್ ಅವರ ಜೀವನದ ಇತಿಹಾಸ ಮತ್ತು ಇಬ್ಬರ ನಡುವಿನ ಸಂಬಂಧದ ಬಗ್ಗೆ ಸರ್ಕಾರಿ ದಾಖಲೆಗಳ ಸಹಿತ ಕೃತಿಯಲ್ಲಿ ಮಾಹಿತಿ ನೀಡಲಾಗಿದೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ.

ಕಳೆದ ಐದಾರು ದಶಕಗಳಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕನ್ನಡಿಗರ ಆರಾಧ್ಯ ದೈವ ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಅವರ ಚಾರಿತ್ರ್ಯವಧೆ ಮಾಡುವ ಏಕೈಕ ದುರುದ್ದೇಶದಿಂದ ಅವರ ವೈಯಕ್ತಿಕ ಬದುಕಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆ ನಿಜಕ್ಕೂ ಡಾ. ರಾಜ್‌ಕುಮಾರ್ ಮತ್ತು ದಿವಂಗತ ನಟಿ ಲೀಲಾವತಿ ಅವರ ನಡುವೆ ಇದ್ದ ಸಂಬಂಧವೇನು? ದಿವಂಗತ ನಟಿ ಲೀಲಾವತಿಯವರ ಪತಿ ಯಾರು? ನಟ ವಿನೋದ್ ರಾಜ್ ಅವರ ತಂದೆ ಯಾರು? ಕನ್ನಡದ ಖ್ಯಾತ ರಂಗಭೂಮಿ ಕಲಾವಿದ, ಹಿರಿಯ ಚಲನಚಿತ್ರ ನಟ ಹಾಗೂ ಸಂಸ್ಕೃತ ಶಿರೋಮಣಿ ದಿವಂಗತ ಮಹಾಲಿಂಗ ಭಾಗವತರ್ ಅವರಿಗೂ ನಟಿ ಲೀಲಾವತಿಯವರಿಗೂ ಇದ್ದ ಸಂಬಂಧವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸರ್ಕಾರಿ ದಾಖಲೆಗಳನ್ನು ಸಂಗ್ರಹಸಿ ಕೃತಿ ರಚಿಸಲಾಗಿದೆ ಎಂದು ರಮೇಶ್ ಎನ್.ಆರ್. ತಿಳಿಸಿದ್ದಾರೆ.
ತಮಿಳುನಾಡಿನ ಚೆನ್ನೈ ಮಹಾನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಚಂಗಲ್‌ಪಟ್ಟು ಜಿಲ್ಲೆಗಳಲ್ಲಿ ದಿವಂಗತ ಮಹಾಲಿಂಗ ಭಾಗವತರ್, ದಿವಂಗತ ಲೀಲಾವತಿ ಮತ್ತು ನಟ ವಿನೋದ್ ರಾಜ್ ಅವರ ಮಾಲೀಕತ್ವದ ಸ್ವತ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸಲಾಗಿದೆ. ಈ ಸ್ವತ್ತುಗಳಿಗೆ ಸಂಬಂಧಿಸಿದ ತೀರುವಳಿ ಪತ್ರ (Settlement Deed), ಕ್ರಯಪತ್ರ (Sale Deed), ದಾನಪತ್ರ (Gift Deed), ಆರ್‌ಟಿಸಿ, ಪಹಣಿ, ಪಟ್ಟಾ ದಾಖಲೆಗಳು ಹಾಗೂ ಆಧಾರ್ ಕಾರ್ಡ್‌ಗಳನ್ನು ಕಲೆಹಾಕಿ, 2025ರ ಫೆಬ್ರವರಿ ತಿಂಗಳಲ್ಲಿ ಪತ್ರಿಕಾ ಮಾಧ್ಯಮದ ಸಮಕ್ಷಮದಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಹಿರಿಯ ಪತ್ರಕರ್ತ ಬಿ. ಗಣಪತಿ, ಹಿರಿಯ ಲೇಖಕರಾದ ದೊಡ್ಡಹುಲ್ಲೂರು ರುಕ್ಕೋಜಿ ಮತ್ತು ಜಗನ್ನಾಥ್ ಬಹುಳೆ ಹಾಗೂ ಕನ್ನಡ ಚಲನಚಿತ್ರ ನಿರ್ದೇಶಕ ಪ್ರವೀಣ್ ನಾಯಕ್ ಅವರು ಭಾಗವಹಿಸಿ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಡಾ. ರಾಜ್‌ಕುಮಾರ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದನ್ನೂ ಓದಿ : ‘ಗೋಮಾತೆಯ ಗೌರವ ಅಭಿಯಾನ’ : ಜು.27ರಂದು ಉ.ಕನ್ನಡದಲ್ಲಿ ಗೋ ರಕ್ಷಕರಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ!



















