ಬೆಂಗಳೂರು : ಕೋರ್ಟ್‌ನಲ್ಲಿ ದಂಡ ಕಟ್ಟಬೇಕಾದ ಪ್ರಕರಣದಲ್ಲಿ ವಾಹನ ಬಿಡುವುದಾಗಿ ಹೇಳಿ ಲಾರಿ ಚಾಲಕನಿಂದ ಠಾಣೆಯಲ್ಲೇ 5 ಸಾವಿರ ಲಂಚ ಪಡೆದ ಆರೋಪದ ಮೇಲೆ ಪುಲಕೇಶಿನಗರ ಟ್ರಾಫಿಕ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೋಮಶೇಖರ್ ಅವರನ್ನು ಅಮಾನತು ಮಾಡಲಾಗಿದೆ. ಕರ್ತವ್ಯಲೋಪ ಹಾಗೂ ಲಂಚ ಪಡೆದ ಆರೋಪದಡಿ ಹೆಡ್ ಕಾನ್ಸ್‌ಟೇಬಲ್ ಸೋಮಶೇಖರ್ ಅವರನ್ನು ಅಮಾನತುಗೊಳಿಸಿ ಪೂರ್ವ ಸಂಚಾರ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ಆದೇಶ ಹೊರಡಿಸಿದ್ದಾರೆ.
ಸೆಂಟ್ ಜಾನ್ಸ್ ಮುಖ್ಯ ರಸ್ತೆಯಲ್ಲಿ ಕಬ್ಬಿಣ ತುಂಬಿದ ಲಾರಿ ಚಾಲನೆ ಮಾಡಿದ್ದ ಚಾಲಕ ಸಯ್ಯದ್ ಅಪ್ರೋಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಳೆದ ಜುಲೈ 18ರಂದು ಸಂಜೆ ಪೀಕ್ ಅವರ್‌ನಲ್ಲಿ ಕಬ್ಬಿಣದ ಲೋಡ್ ತುಂಬಿದ್ದ ಲಾರಿ ಚಾಲನೆ ಮಾಡಿದ ಹಿನ್ನೆಲೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು BNS 285 ಸೆಕ್ಷನ್ ಅಡಿ ಕೇಸ್ ದಾಖಲಿಸಲಾಗಿತ್ತು. ಈ ಸೆಕ್ಷನ್ ಅಡಿ ದಾಖಲಾದ ಪ್ರಕರಣದಲ್ಲಿ ಕೋರ್ಟ್‌ನಲ್ಲಿ ದಂಡ ಪಾವತಿಸಬೇಕಾಗಿದ್ದು, ದಂಡದ ಮೊತ್ತವನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ.
ಆದರೆ, ಪುಲಕೇಶಿನಗರ ಟ್ರಾಫಿಕ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೋಮಶೇಖರ್, ವಾಹನವನ್ನು ಬಿಡುವುದಾಗಿ ಹೇಳಿ ಲಾರಿ ಚಾಲಕನಿಂದ ₹5 ಸಾವಿರ ಲಂಚ ಪಡೆದಿದ್ದಾರೆ ಎನ್ನಲಾಗಿದೆ. ಹಣ ನೀಡುವ ವೇಳೆ ಲಾರಿ ಚಾಲಕ ತನ್ನ ಮೊಬೈಲ್‌ನಲ್ಲಿ ಹಣ ನೀಡುತ್ತಿರುವುದನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಹಣ ನೀಡಿದ ಬಳಿಕ ಪ್ರಕರಣ ದಾಖಲಾಗಿದ್ದು, ಕೋರ್ಟ್‌ನಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂಬುದು ಲಾರಿ ಚಾಲಕನ ಗಮನಕ್ಕೆ ಬಂದಿದೆ.
ಈ ಹಿನ್ನೆಲೆ ಹಣ ಪಡೆದಿರುವ ವಿಡಿಯೋ ಸಮೇತ ಲಾರಿ ಚಾಲಕ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿದ ಬಳಿಕ ಕರ್ತವ್ಯಲೋಪವೆಸಗಿ ಲಂಚ ಪಡೆದ ಆರೋಪದಡಿ ಹೆಡ್ ಕಾನ್ಸ್‌ಟೇಬಲ್ ಸೋಮಶೇಖರ್ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ : ‘ಗೋಮಾತೆಯ ಗೌರವ ಅಭಿಯಾನ’ : ಜು.27ರಂದು ಉ.ಕನ್ನಡದಲ್ಲಿ ಗೋ ರಕ್ಷಕರಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ!



















