ಬಾಗಲಕೋಟೆ : ಮಹಿಂದ್ರಾ ಎಕ್ಸ್ಯುವಿ ಕಾರು ಸ್ಫೋಟಗೊಂಡಿರುವ ಆಘಾತಕಾರಿ ಘಟನೆ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರು ಪಲ್ಟಿಯಾಗಿ ಹೊತ್ತಿ ಉರಿದು, ಬಿಡಿ ಭಾಗಗಳು ಛಿದ್ರ ಛಿದ್ರವಾಗಿ ಬಿದ್ದಿದ್ದು, ದುರ್ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಹಿಪ್ಪರಗಿ ಗ್ರಾಮದ ಬಳಿ ಯುವರಾಜ ವೈನ್ ಶಾಪ್ ಎದುರು ಈ ಅವಘಡ ಸಂಭವಿಸಿದೆ. ಬಾರ್ ಎದುರು ನಿಲ್ಲಿಸಿದ್ದಾಗ ಕಾರು ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ ಎನ್ನಲಾಗಿದೆ. ಸ್ಥಳಕ್ಕೆ ಜಮಖಂಡಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೊಕೊ ಟೀಮ್ ಹಾಗೂ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಯಾವ ಕಾರಣದಿಂದ ಸ್ಪೋಟ ಆಗಿದೆ ಎಂದು ತನಿಖೆ ನಡೆಸುತ್ತಿದ್ದಾರೆ.
ಆಗಿದ್ದೇನು?
ಸ್ಪೋಟಗೊಂಡಿರುವ ಮಹಿಂದ್ರಾ XUV300 ಕಾರು ಎಂ.ಜಿ.ತೋರಗಲ್ ಎಂಬುವರ ಹೆಸರಿನಲ್ಲಿರುವುದು ಗೊತ್ತಾಗಿದ್ದು, ಕಾರು ಸ್ಫೋಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ನಿನ್ನೆ ಸಂಜೆ 4.30ರಲ್ಲಿ ಕಾರನ್ನು ತಂದು ಬಾರ್ ಬಳಿ ನಿಲ್ಲಿಸಲಾಗಿತ್ತು. ರಾತ್ರಿ ಮನೆಗೆ ಹೊರಡಬೇಕು ಅಂದಾಗ ಸ್ಫೋಟದ ಶಬ್ದ ಕೇಳಿಸಿತು. ಬಾಂಬ್ ಸ್ಫೋಟ ಆಗಿರಬಹುದು ಅಂತಾ ಅನುಮಾನ ಬರುತ್ತಿದೆ. ಕಾರು ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಮನೆಗಳ ಶೀಟ್ ಹಾರಿವೆ.
ಘಟನೆ ವೇಳೆ ಪೂಜಾರಿ ಎಂಬ ಹುಡುಗ ಸ್ವಲ್ಪ ದೂರದಲ್ಲಿ ಇದ್ದ. ಆ ಹುಡುಗನೇ ಹೀಗೆ ಮಾಡಿರಬಹುದು ಎಂದು ಹಿಡಿದೆವು. ಆದರೆ ಆತ ನನಗೆ ಗಾಯವಾಗಿದೆ ಎಂದು ತೋರಿಸಿದ್ದಾನೆ. ಜಮಖಂಡಿ ಆಸ್ಪತ್ರೆಯಲ್ಲಿ ಆ ಹುಡುಗ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಕಾರು ನಿಲ್ಲಿಸಿದ್ದ ವೈನ್ ಶಾಪ್ ಮ್ಯಾನೇಜರ್ ಹನುಮಂತ ತಿಳಿಸಿದ್ದಾರೆ.
ಇದನ್ನೂ ಓದಿ : ‘ಗೋಮಾತೆಯ ಗೌರವ ಅಭಿಯಾನ’ : ಜು.27ರಂದು ಉ.ಕನ್ನಡದಲ್ಲಿ ಗೋ ರಕ್ಷಕರಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ!



















