ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳನ್ನು ಖಂಡಿಸಿ, ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಬೃಹತ್ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿರುವ ಹೇಳಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. “ಇಂದಿನ ಯುವ ಪೀಳಿಗೆಯು ದಾರಿ ತಪ್ಪಿಲ್ಲ. ಆಜ್ಞೆಗಳನ್ನು ಹೊರಡಿಸುವ ಬದಲು ಪ್ರೀತಿ, ಆತ್ಮೀಯತೆ ಹಾಗೂ ಅರ್ಥಪೂರ್ಣ ಸಂವಾದದ ಮೂಲಕ ಅವರ ಮನವೊಲಿಸುವ ಅಗತ್ಯವಿದೆ,” ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಉಪದೇಶಕ್ಕಿಂತ ಸಂವಾದ ಮುಖ್ಯ
ವಿಶ್ವ ಮಾಂಗಲ್ಯ ಸಭಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ಭಾಗವತ್, ಪೀಳಿಗೆಗಳ ನಡುವೆ ಹೆಚ್ಚುತ್ತಿರುವ ಅಂತರದ ಕುರಿತು ಬೆಳಕು ಚೆಲ್ಲಿದ್ದಾರೆ. “ನಾವು ಯುವಕರಾಗಿದ್ದ ಕಾಲದಲ್ಲಿ ಹಿರಿಯರ ಮಾತುಗಳನ್ನು ಆಕ್ಷೇಪವಿಲ್ಲದೆ ಪಾಲಿಸುವ ಸಂಸ್ಕೃತಿ ಇತ್ತು. ಆದರೆ ಇಂದಿನ ಕಾಲಮಾನ ಬದಲಾಗಿದೆ. ಇಂದಿನ ಯುವ ಪೀಳಿಗೆಯ ಬಳಿ ಸಾಕಷ್ಟು ಪ್ರಶ್ನೆಗಳಿವೆ. ಹಿರಿಯರಾಗಿ ನಾವು ಅವರಿಗೆ ಸರಿಯಾದ ಕಾರಣಗಳನ್ನು ವಿವರಿಸಿ ಹೇಳಬೇಕಿದೆ. ಕುಟುಂಬಗಳಲ್ಲಿ ಹಾಗೂ ಸಮಾಜದಲ್ಲಿ ಯುವಕರೊಂದಿಗೆ ಮುಕ್ತವಾಗಿ ಸಂವಹನ ನಡೆಸುವ ವಾತಾವರಣ ನಿರ್ಮಾಣವಾಗಬೇಕು,” ಎಂದು ಹೇಳಿದರು.
ಇದೇ ವೇಳೆ ಹಿರಿಯರು ತಮ್ಮ ನಿರ್ಧಾರಗಳನ್ನು ಯುವಕರ ಮೇಲೆ ಬಲವಂತವಾಗಿ ಹೇರಬಾರದು ಎಂದು ಎಚ್ಚರಿಸಿದ ಅವರು, “ಯುವಜನರ ನಂಬಿಕೆಯನ್ನು ಗೆಲ್ಲಲು ಬೆದರಿಕೆ ಅಥವಾ ಆಜ್ಞೆಗಳು ಕೆಲಸ ಮಾಡುವುದಿಲ್ಲ. ಅಲ್ಲಿ ಆದೇಶಗಳಿಗಿಂತ ಸಮ್ಮತಿ ಮತ್ತು ಒಮ್ಮತದ ನಿರ್ಧಾರಗಳು ಮುಖ್ಯವಾಗುತ್ತವೆ,” ಎಂದು ಒತ್ತಿ ಹೇಳಿದರು.
ಭಾಗವತ್ ಅವರು ತಮ್ಮ ಭಾಷಣದಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಯ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಈ ಹೇಳಿಕೆಗಳು ಪ್ರಸ್ತುತ ನಡೆಯುತ್ತಿರುವ ಹೋರಾಟಕ್ಕೇ ಅನ್ವಯಿಸುತ್ತವೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದೆರಡು ವಾರಗಳಿಂದ ದೆಹಲಿ ಬೀದಿಗಳಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಇತ್ತೀಚೆಗೆ ಸಂಸತ್ ಚಲೋ ವೇಳೆ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದವು.
ಇತ್ತೀಚೆಗಷ್ಟೇ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, “ವಿದ್ಯಾರ್ಥಿಗಳ ಸುದೀರ್ಘ ಹೋರಾಟದ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥರ ಮೌನವು ಅವರ ಭಾಷಣಗಳಿಗಿಂತ ಹೆಚ್ಚು ವಾಗ್ದಂಡನೆ ನಡೆಸುತ್ತಿದೆ,” ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು. ಮತ್ತೊಂದೆಡೆ, ಆರ್‌ಎಸ್‌ಎಸ್‌ನ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಅವರು, ಈ ಪ್ರತಿಭಟನೆಯ ಹಿಂದೆ ಭಾರತ ಅಭಿವೃದ್ಧಿ ಹೊಂದುವುದನ್ನು ಸಹಿಸದ ದೇಶಿ ಹಾಗೂ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದರು.
ಶಿಕ್ಷಣ ಸಚಿವರ ರಾಜೀನಾಮೆಗೆ ಮುಂದುವರಿದ ಪಟ್ಟು
ನೀಟ್ (NEET) ಪೇಪರ್ ಲೀಕ್ ಹಗರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು ತರುವುದಾಗಿ ಘೋಷಿಸಿದ್ದರೂ, ಪ್ರತಿಭಟನಾಕಾರರು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯಲಿರುವ ನಿರ್ಣಾಯಕ ಘಳಿಗೆಯಲ್ಲೇ ಮೋಹನ್ ಭಾಗವತ್ ಅವರ ಈ ‘ಸಂವಾದ ಮತ್ತು ಸಮ್ಮತಿ’ಯ ಹೇಳಿಕೆ ಹೊರಬಿದ್ದಿರುವುದು ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಪ್ರಧಾನ್ ರಾಜೀನಾಮೆ ನೀಡದಿದ್ದರೆ ಮಾತುಕತೆಯ ಅಗತ್ಯವೇ ಇಲ್ಲ : 3ನೇ ಸುತ್ತಿನ ಸಭೆಗೂ ಮುನ್ನ CJP ಪಟ್ಟು!



















