ಬೆಂಗಳೂರು: ಇಂಗ್ಲೆಂಡಿನ ಯುವ ಬ್ಯಾಟರ್ ಜೇಕಬ್ ಬೆಥೆಲ್ ಅವರು ತಮ್ಮ ಕೌಂಟಿ ಕ್ರಿಕೆಟ್ ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಐಪಿಎಲ್‌ನಲ್ಲಿ ಆಡಲು ನಿರ್ಧರಿಸಿದ್ದು ಈಗ ಭಾರಿ ಟೀಕೆಗೆ ಗುರಿಯಾಗಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಆಡಬೇಕಿತ್ತು, ಅದರ ಪೂರ್ವಭಾವಿ ಸಿದ್ಧತೆಗಾಗಿ ಬೆಥೆಲ್ ವಾರ್ವಿಕ್‌ಶೈರ್ ಪರ ಕೌಂಟಿ ಪಂದ್ಯಗಳನ್ನು ಆಡಬೇಕಿತ್ತು ಎಂದು ಹಲವು ಇಂಗ್ಲೆಂಡ್ ಮಾಜಿ ಆಟಗಾರರು ಹಾಗೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ 2026 ರ ಪಂದ್ಯಾವಳಿಯಲ್ಲಿ ಬೆಥೆಲ್ ಬಹುಪಾಲು ಸಮಯವನ್ನು ಬೆಂಚ್ ಕಾಯುವಲ್ಲಿಯೇ ಕಳೆದಿದ್ದರು. ತದನಂತರ ಅವರು ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಗಾಯಗೊಂಡಾಗಲೂ ಇದಕ್ಕೆ ಅವರು ಐಪಿಎಲ್ ಆಯ್ಕೆ ಮಾಡಿಕೊಂಡಿದ್ದೇ ಕಾರಣ ಎಂದು ಇಂಗ್ಲಿಷ್ ಕ್ರಿಕೆಟ್ ವಲಯದಲ್ಲಿ ವ್ಯಾಪಕವಾಗಿ ಟೀಕಿಸಲಾಯಿತು. ಈ ಸಂದರ್ಭದಲ್ಲಿ ಬೆಥೆಲ್ ಬೆಂಬಲಕ್ಕೆ ನಿಂತಿರುವ ಭಾರತದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಎಲ್ಲದಕ್ಕೂ ಐಪಿಎಲ್ ಮೇಲೆ ಗೂಬೆ ಕೂರಿಸುವ ಇಂಗ್ಲೆಂಡ್ ಕ್ರಿಕೆಟ್ ಪರಿಣತರ ಮನಸ್ಥಿತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಡಳಿತ ಮಂಡಳಿಗಳ ಮೇಲೆ ಡೇವಿಡ್ ಲಾಯ್ಡ್ ಅಸಮಾಧಾನ
ಬೆಥೆಲ್ ಆಯ್ಕೆಯ ಕುರಿತಂತೆ ಪ್ರಚಲಿತದಲ್ಲಿರುವ ಈ ಚರ್ಚೆಯಲ್ಲಿ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಡೇವಿಡ್ ಲಾಯ್ಡ್ ಕೂಡ ದನಿಗೂಡಿಸಿದ್ದು, ಅವರು ಯುವ ಆಟಗಾರನನ್ನು ದೂಷಿಸಲು ನಿರಾಕರಿಸಿದ್ದಾರೆ. ಜೇಕಬ್ ಬೆಥೆಲ್ ಅವರು ಐಪಿಎಲ್ ಆಡಲು ಒಪ್ಪಂದ ಮಾಡಿಕೊಂಡಿದ್ದಾರಷ್ಟೇ ವಿನಹ ಅವರದ್ದೇನು ತಪ್ಪಿಲ್ಲ ಎಂದಿರುವ ಲಾಯ್ಡ್, ಈ ವಿವಾದಕ್ಕೆ ನೇರವಾಗಿ ಕ್ರಿಕೆಟ್ ಆಡಳಿತ ಮಂಡಳಿಗಳನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಐಸಿಸಿ (ICC), ಬಿಸಿಸಿಐ (BCCI) ಮತ್ತು ಇಸಿಬಿ (ECB) ಯಂತಹ ಸಂಸ್ಥೆಗಳು ವೇಳಾಪಟ್ಟಿಗಳನ್ನು ಸಿದ್ಧಪಡಿಸುತ್ತವೆ; ಆದರೆ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳು ಒಂದೇ ಬಾರಿಗೆ ಎದುರಾಗುವಂತೆ ವೇಳಾಪಟ್ಟಿ ರಚಿಸಿರುವುದು ಹಾಗೂ ಅದರಲ್ಲಿ ಯಾವುದೇ ಬದಲಾವಣೆ ತರಲು ನಿರಾಕರಿಸುತ್ತಿರುವುದು ಈ ಎಲ್ಲಾ ಗೊಂದಲಗಳಿಗೆ ಪ್ರಮುಖ ಕಾರಣ ಎಂದು ಅವರು ‘ಸ್ಟಿಕ್ ಟು ಕ್ರಿಕೆಟ್’ ಪಾಡ್‌ಕ್ಯಾಸ್ಟ್‌ನಲ್ಲಿ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಇಂಗ್ಲೆಂಡ್ ನ ‘ಬ್ಲೇಮ್ ಗೇಮ್’ ವಿರುದ್ಧ ಗುಡುಗಿದ ದಿನೇಶ್ ಕಾರ್ತಿಕ್
ಒಂದೆಡೆ ಡೇವಿಡ್ ಲಾಯ್ಡ್ ಅವರು ಆಟಗಾರನನ್ನು ದೂಷಿಸುವುದಿಲ್ಲ ಎಂದು ಹೇಳಿದರೂ ಸಹ, ವಾಸ್ತವದಲ್ಲಿ ಈ ವಿವಾದದ ಎಲ್ಲಾ ಬಿಸಿಯನ್ನು ಎದುರಿಸುತ್ತಿರುವುದು ಅದೇ ಯುವ ಆಟಗಾರ ಎಂದು ದಿನೇಶ್ ಕಾರ್ತಿಕ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಇಂಗ್ಲೆಂಡ್ ಆಟಗಾರರು ತಮ್ಮ ಕಳಪೆ ಪ್ರದರ್ಶನ ಅಥವಾ ಕಠಿಣ ಹಂತವನ್ನು ಎದುರಿಸಿದಾಗಲೆಲ್ಲ ಐಪಿಎಲ್ ಅನ್ನು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕಾರಣವನ್ನಾಗಿ ಮುಂದಿಟ್ಟುಕೊಂಡು ಟೀಕಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಯಾವುದೇ ಗ್ರಹಿಸಲಾಗದ ಕಾರಣಗಳಿಗೆ ಇಂಗ್ಲೆಂಡ್ ಐಪಿಎಲ್ ಟೂರ್ನಿಯನ್ನು ದ್ವೇಷಿಸಲು ಮಾರ್ಗಗಳನ್ನು ಹುಡುಕುತ್ತಿದೆ ಹಾಗೂ ಅದು ಸಂಪೂರ್ಣವಾಗಿ ಅನ್ಯಾಯ ಎಂದು ಕಾರ್ತಿಕ್ ಕಿಡಿಕಾರಿದ್ದಾರೆ. ವಿದೇಶಿ ಆಟಗಾರರೂ ಸಹ ಐಪಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ ಹಾಗೂ ತಮ್ಮ ಆಟವನ್ನು ಉತ್ತಮಪಡಿಸಿಕೊಳ್ಳುತ್ತಾರೆ ಎಂಬುದನ್ನು ಅವರು ಈ ವೇಳೆ ಒತ್ತಿ ಹೇಳಿದ್ದಾರೆ.
ಕಾರ್ತಿಕ್ ಟೀಕೆಗೆ ಮತ್ತೆ ಮರುಪ್ರಶ್ನೆ ಹಾಕಿದ ಡೇವಿಡ್ ಲಾಯ್ಡ್
ದಿನೇಶ್ ಕಾರ್ತಿಕ್ ಅವರ ಈ ನೇರ ವಾಗ್ದಾಳಿಯನ್ನು ಒಪ್ಪಿಕೊಳ್ಳದ ಡೇವಿಡ್ ಲಾಯ್ಡ್, ತಾವು ಐಪಿಎಲ್ ಅನ್ನು ದ್ವೇಷಿಸುತ್ತಿಲ್ಲ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಇಂಗ್ಲೆಂಡ್‌ನಲ್ಲಿ ಐಪಿಎಲ್ ಟೂರ್ನಿಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತದೆ, ಅಲ್ಲಿ ಅಪಾರ ಸಂಖ್ಯೆಯ ಜನರು ಇದನ್ನು ವೀಕ್ಷಿಸುತ್ತಾರೆ ಹಾಗೂ ಅದರ ಬಗ್ಗೆ ಚರ್ಚೆ ನಡೆಸುತ್ತಾರೆ. ಹೀಗಿರುವಾಗ ತಾವು ನಿರ್ದಿಷ್ಟವಾಗಿ ಟೂರ್ನಿಯನ್ನು ಅಥವಾ ಅದರ ಸ್ವರೂಪವನ್ನು ಟೀಕಿಸುತ್ತಿಲ್ಲ ಎಂದು ಹೇಳುವ ಮೂಲಕ ದಿನೇಶ್ ಕಾರ್ತಿಕ್ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.



















