ಅಮರಾವತಿ : ಆಂಧ್ರಪ್ರದೇಶದ ಧವಳೇಶ್ವರಂನ ಜಿಪಂ ಬಾಲಕಿಯರ ಪ್ರೌಢಶಾಲೆಯ (ZPGHS) 10ನೇ ತರಗತಿ ವಿದ್ಯಾರ್ಥಿನಿ, 14 ವರ್ಷದ ಕಂಡುಲ ಜೆಸ್ಸಿ ಜಾಗತಿಕ ಮಟ್ಟದ ಬಾಹ್ಯಾಕಾಶ ಯೋಜನೆಯೊಂದಕ್ಕೆ ಆಯ್ಕೆಯಾಗುವ ಮೂಲಕ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ವಿಶ್ವದ ಮೊದಲ ಜಾಗತಿಕ ಸರ್ವ-ಬಾಲಕಿಯರ ಚಂದ್ರ ಕ್ಯೂಬ್‌ಸ್ಯಾಟ್ ಯೋಜನೆಯಾದ ‘ಮಿಷನ್ ಶಕ್ತಿಸ್ಯಾಟ್’ಗೆ (Mission ShakthiSAT) ಭಾರತದಿಂದ ಆಯ್ಕೆಯಾದ 20 ವಿದ್ಯಾರ್ಥಿನಿಯರ ತಂಡದಲ್ಲಿ ಜೆಸ್ಸಿ ಕೂಡ ಒಬ್ಬರು.
ಮರಗೆಲಸ ಮಾಡುವ ವ್ಯಕ್ತಿಯ ಮಗಳಾಗಿರುವ ಜೆಸ್ಸಿ, ವಿಶ್ವದ 108 ದೇಶಗಳ ಸುಮಾರು 12,000 ವಿದ್ಯಾರ್ಥಿನಿಯರು ಭಾಗವಹಿಸಿದ್ದ ಅತ್ಯಂತ ಕಠಿಣ ಸ್ಪರ್ಧೆಯನ್ನು ಎದುರಿಸಿ ಈ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ, ಭಾರತೀಯ ತಂಡದಲ್ಲಿ ಆಂಧ್ರಪ್ರದೇಶದಿಂದ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿನಿ ಈಕೆ. ಜೆಸ್ಸಿಯ ವಿಜ್ಞಾನ ವಿಷಯದ ಮೇಲಿನ ಆಸಕ್ತಿಯನ್ನು ಗುರುತಿಸಿ ‘ಅಟಲ್ ಟಿಂಕರಿಂಗ್ ಲ್ಯಾಬ್’ ಉಸ್ತುವಾರಿ ಶಿಕ್ಷಕಿ ಮಣಿಮಾಲಾ ಅವರು ಕಳೆದ ವರ್ಷ ಈ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿದ್ದರು.
ಎಸ್ಎಸ್ಎಲ್‍ಸಿ ವ್ಯಾಸಂಗದ ಜೊತೆಯಲ್ಲೇ ಬಾಹ್ಯಾಕಾಶ ತರಬೇತಿ
10ನೇ ತರಗತಿಯ ಬೋರ್ಡ್ ಪರೀಕ್ಷೆಯ ತಯಾರಿ ನಡೆಸುತ್ತಿರುವ ನಡುವೆಯೂ ಜೆಸ್ಸಿ ಪ್ರತಿದಿನ ಶಾಲೆಯ ನಂತರ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದರು. ಪ್ರಸ್ತುತ ಅವರು ಈ ಯೋಜನೆಯ ಶೇ.50 ರಿಂದ 60 ರಷ್ಟು ಪಠ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ. ಮಿಷನ್ ಶಕ್ತಿಸ್ಯಾಟ್ ಒಟ್ಟು 550 ಸೆಷನ್‌ಗಳು ಮತ್ತು 21 ಮಾಡ್ಯೂಲ್‌ಗಳನ್ನು ಹೊಂದಿದ್ದು, ಉಪಗ್ರಹ ವ್ಯವಸ್ಥೆ, ಪ್ರೊಪಲ್ಷನ್, ಥರ್ಮೋಡೈನಾಮಿಕ್ಸ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ವಿಷಯಗಳನ್ನು ಒಳಗೊಂಡಿದೆ.
ಶಾಲಾ ಪಠ್ಯಕ್ರಮಕ್ಕಿಂತ ಇದು ತೀರ ಕ್ಲಿಷ್ಟಕರವಾಗಿದ್ದರೂ ಬಿಡದೆ ಸತತ ಅಭ್ಯಾಸ ನಡೆಸಿದ ಜೆಸ್ಸಿ, ಅಂತಾರಾಷ್ಟ್ರೀಯ ವಿಜ್ಞಾನಿಗಳು ನಡೆಸಿದ ಸುದೀರ್ಘ ಸಂದರ್ಶನವನ್ನು ಎದುರಿಸಲು ತಮ್ಮ ಇಂಗ್ಲಿಷ್ ಸಂವಹನ ಕೌಶಲ್ಯವನ್ನೂ ವೃದ್ಧಿಸಿಕೊಂಡಿದ್ದರು. “ಅಂತಾರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಮಾತನಾಡುವಾಗ ನನಗೆ ಭಯವಾಗುತ್ತಿತ್ತು. ನನ್ನಂತಹ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಆಯ್ಕೆಯಾಗುತ್ತಾಳೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ,” ಎಂದು ಜೆಸ್ಸಿ ಸಂತಸ ಹಂಚಿಕೊಂಡಿದ್ದಾರೆ. ಸಾಕಷ್ಟು ಆರ್ಥಿಕ ಸಂಕಷ್ಟಗಳ ನಡುವೆಯೂ ಮಗಳ ಈ ಸಾಧನೆ ಕಂಡು ತಾಯಿ ಅರುಣಾ ಹಾಗೂ ಬಡಗಿಯಾಗಿರುವ ತಂದೆಯ ಕಣ್ಣಲ್ಲಿ ಆನಂದಭಾಷ್ಪ ಜಿನುಗಿದೆ.
ಆ.23ರಿಂದ ದೆಹಲಿಯಲ್ಲಿ ತರಬೇತಿ; ಅಕ್ಟೋಬರ್‌ನಲ್ಲಿ ಉಡಾವಣೆ
ಈ ಯೋಜನೆಯ ಮುಂದಿನ ಹಂತದ ತರಬೇತಿಯು ಆಗಸ್ಟ್ 23 ರಿಂದ ನವದೆಹಲಿಯಲ್ಲಿ ಪ್ರಾರಂಭವಾಗಲಿದ್ದು, ಪ್ರಾಯೋಗಿಕ ತರಬೇತಿ ಮತ್ತು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮಗಳು ನಡೆಯಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೆಸ್ಸಿ ಕಾತರರಾಗಿದ್ದಾರೆ. ತರಬೇತಿಯ ಅವಧಿಯಲ್ಲಿ ಅವರು ವಿಜ್ಞಾನಿಗಳೊಂದಿಗೆ ಉಪಗ್ರಹ ವಿನ್ಯಾಸ, ಪೇಲೋಡ್ ಅಭಿವೃದ್ಧಿ ಮತ್ತು ಮಿಷನ್ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಲಿದ್ದಾರೆ.
ವಿದ್ಯಾರ್ಥಿನಿಯರೇ ನಿರ್ಮಿಸುತ್ತಿರುವ ಈ ಚಂದ್ರ ಕ್ಯೂಬ್‌ಸ್ಯಾಟ್ ಉಪಗ್ರಹವನ್ನು ಅಕ್ಟೋಬರ್ 11 ರಂದು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಇಸ್ರೋ (ISRO) ಸೇರುವ ಕನಸು ಹೊಂದಿರುವ ಜೆಸ್ಸಿಯ ಈ ಸಾಧನೆಯನ್ನು ರಾಜ್ಯಸಭಾ ಸಂಸದ ಹಾಗೂ ಟಿಡಿಪಿ ರಾಷ್ಟ್ರೀಯ ಉಪಾಧ್ಯಕ್ಷ ಸನಾ ಸತೀಶ್ ಬಾಬು ಶ್ಲಾಘಿಸಿದ್ದು, “ಜೆಸ್ಸಿ ಕೇವಲ ಚಂದ್ರನನ್ನು ತಲುಪಲು ಯತ್ನಿಸುತ್ತಿಲ್ಲ, ಬದಲಿಗೆ ಇಡೀ ಹೊಸ ಪೀಳಿಗೆಗೆ ನಕ್ಷತ್ರಗಳನ್ನು ಮುಟ್ಟಲು ಪ್ರೇರಣೆ ನೀಡುತ್ತಿದ್ದಾಳೆ,” ಎಂದು ಪ್ರಶಂಸಿಸಿದ್ದಾರೆ.
ಇದನ್ನೂ ಓದಿ ; ಪ್ರಧಾನಿ ಮೋದಿಯನ್ನು ನಿಂದಿಸಿದ್ದ ಯುವಕ ಪೊಲೀಸ್ ವಶಕ್ಕೆ!


















