ನವದೆಹಲಿ : ಸೋಮವಾರ ದೆಹಲಿಯಲ್ಲಿ ನಡೆದ ಸಂಸತ್ ಚಲೋ ಪ್ರತಿಭಟನೆ ಮತ್ತು ಸಂಘರ್ಷದ ಬೆನ್ನಲ್ಲೇ ‘ಕಾಕ್ರೋಚ್ ಜನತಾ ಪಾರ್ಟಿ‘ (CJP) ನೇತೃತ್ವದ ಪ್ರತಿಭಟನಾಕಾರರು ಮಂಗಳವಾರ ಬೆಳಗ್ಗೆ ಮತ್ತೆ ಜಂತರ್ ಮಂತರ್‌ಗೆ ಲಗ್ಗೆ ಇಟ್ಟಿದ್ದಾರೆ. ಪೋಲೀಸರು ನಿನ್ನೆಯೇ ಅಲ್ಲಿ ಹಾಕಲಾಗಿದ್ದ ಎಲ್ಲ ಶಾಮಿಯಾನಗಳು ಹಾಗೂ ವೇದಿಕೆಯನ್ನು ಅಲ್ಲಿಂದ ತೆರವುಗೊಳಿಸಿದ್ದರೂ, ಸಿಜೆಪಿ ಕರೆಗೆ ಓಗೊಟ್ಟು ನೂರಾರು ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಜಂತರ್ ಮಂತರ್‌ನಲ್ಲಿ ಮರುಸಂಘಟಿತರಾಗಿದ್ದು, ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.
ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳದಲ್ಲಿ ದೆಹಲಿ ಪೊಲೀಸ್ ಹಾಗೂ ಕ್ಷಿಪ್ರ ಕಾರ್ಯಪಡೆ (RAF) ತುಕಡಿಗಳನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ಸೋಮವಾರ ‘ಸಂಸತ್ ಚಲೋ’ ಮೆರವಣಿಗೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಭಾರೀ ಘರ್ಷಣೆ ಸಂಭವಿಸಿತ್ತು.
ಸಂಸತ್ತಿನ ಸಮೀಪಕ್ಕೆ ಆಗಮಿಸಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದರು. ಈ ಹಿಂಸಾತ್ಮಕ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಪೊಲೀಸರು ಹಾಗೂ 60ಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿ ಹಿಂಸಾಚಾರ ನಡೆಸಿದ ಆರೋಪದ ಮೇಲೆ 70ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಸಚಿವ ಜೆ.ಪಿ. ನಡ್ಡಾ ಜೊತೆ ಸಿಜೆಪಿ ಚರ್ಚೆ
ಹಿಂಸಾತ್ಮಕ ವಾತಾವರಣದ ನಡುವೆಯೇ, ಸನ್ನಿವೇಶ ತಿಳಿಗೊಳಿಸಲು ಸರ್ಕಾರ ಮಾತುಕತೆಯ ಹಾದಿ ತುಳಿದಿತ್ತು. ಸೋಮವಾರ ಮಧ್ಯಾಹ್ನ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸಿಜೆಪಿ ವಕ್ತಾರರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ತಮ್ಮ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದರು.
ಈ ವೇಳೆ ಸಿಜೆಪಿ ಮುಖಂಡರು ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ತಕ್ಷಣದ ಬಿಡುಗಡೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ. ನೀಟ್ (NEET) ಪೇಪರ್ ಲೀಕ್ ಅಕ್ರಮದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕೆಂಬ ಎಂಬ ಬೇಡಿಕೆ ಇದಾಗಿದೆ.
ಬೇಡಿಕೆಗಳ ಕುರಿತು ಸೂಕ್ತ ಹಂತದಲ್ಲಿ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದ್ದರೂ, ಯಾವುದೇ ಸ್ಪಷ್ಟ ಲಿಖಿತ ಭರವಸೆ ಸಿಗದಿರುವುದರಿಂದ ಬೇಡಿಕೆ ಈಡೇರುವವರೆಗೆ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಮುಂದುವರಿಸಿದ ವಾಂಗ್ಚುಕ್
ಮತ್ತೊಂದೆಡೆ, ಆಸ್ಪತ್ರೆಗೆ ದಾಖಲಾಗಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ತಮ್ಮ ನಿರಾಹಾರ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಪ್ರಕಟಿಸಿದ್ದಾರೆ. “ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದಿರುವ ಕ್ರೂರ ದೌರ್ಜನ್ಯವನ್ನು ಕಂಡು ನನಗೆ ತೀವ್ರ ಬೇಸರವಾಗಿದೆ. ನಮ್ಮ ಯುವ ನಾಯಕರಿಗೆ ಸಂಸದರನ್ನು ಭೇಟಿಯಾಗಲು ಅವಕಾಶ ನೀಡುವವರೆಗೆ ಅಥವಾ ಸಂಸದರು ಆಸ್ಪತ್ರೆಗೆ ಬಂದು ನಮ್ಮನ್ನು ಭೇಟಿಯಾಗುವವರೆಗೆ ನಾನು ಆಸ್ಪತ್ರೆಯಲ್ಲೇ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇನೆ,” ಎಂದು ವಾಂಗ್ಚುಕ್ ನೀಡಿರುವ ಕೈಬರಹದ ಸಂದೇಶವನ್ನು ಅವರ ಪತ್ನಿ ಗೀತಾಂಜಲಿ ಆಂಗ್ಮೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : NEET ಅಕ್ರಮ : ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ – ಪ್ರಧಾನಿ ಮೋದಿ ಭರವಸೆ!



















