ಟೆಹ್ರಾನ್ : ಕಳೆದ ತಿಂಗಳಷ್ಟೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದ ಅಮೆರಿಕ ಮತ್ತು ಇರಾನ್ ಈಗ ಮತ್ತೆ ಯುದ್ಧದ ಹಾದಿ ಹಿಡಿದಿದ್ದು, ಜೋರ್ಡಾನ್‌ನಲ್ಲಿ ಇರಾನ್ ನಡೆಸಿದ ಭೀಕರ ದಾಳಿಗೆ ಅಮೆರಿಕದ ಇಬ್ಬರು ಸೈನಿಕರು ಬಲಿಯಾಗಿದ್ದಾರೆ.
ಇದಕ್ಕೆ ಪ್ರತಿಯಾಗಿ ಇರಾನ್ ಮೇಲೆ ಅಮೆರಿಕ ಸೇನೆ ಭೀಕರ ವಾಯುದಾಳಿಗಳನ್ನು ಆರಂಭಿಸಿದೆ. ಇರಾನ್‌ಗೆ ತಕ್ಷಣವೇ ತಕ್ಕ ಶಿಕ್ಷೆ ನೀಡಲು ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಮಿಲಿಟರಿ ಸೆಂಟ್ರಲ್ ಕಮಾಂಡ್ (CENTCOM) ಪ್ರಕಟಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ಆದೇಶದ ಮೇರೆಗೆ ಈ ದಾಳಿಗಳು ನಡೆದಿವೆ ಎಂದೂ ಹೇಳಿದೆ.
ಎಂಟನೇ ರಾತ್ರಿಯೂ ಮುಂದುವರಿದ ದಾಳಿ
ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಇಬ್ಬರು ಅಮೆರಿಕನ್ ಸೈನಿಕರು ಮರಣ ಹೊಂದಿದ್ದಾರೆ. ಮತ್ತೊಬ್ಬ ಸೈನಿಕ ನಾಪತ್ತೆಯಾಗಿದ್ದಾರೆ ಎಂದು ಸೇನೆ ದೃಢಪಡಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಸತತ ಎಂಟನೇ ರಾತ್ರಿಯೂ ಇರಾನ್‌ನ ಪ್ರಮುಖ ನೆಲೆಗಳ ಮೇಲೆ ಪ್ರಹಾರ ನಡೆಸಿದೆ. ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಇರಾನ್ ಒಡ್ಡುತ್ತಿರುವ ಭೀತಿಯನ್ನು ಮಟ್ಟಹಾಕಲು ಮತ್ತು ಅವರ ದಾಳಿ ಸಾಮರ್ಥ್ಯವನ್ನು ಕುಂದಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಮುರಿದುಬಿದ್ದ ಶಾಂತಿ ಒಪ್ಪಂದ
ಈ ವರ್ಷದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯೊಂದಿಗೆ ಆರಂಭವಾದ ಈ ಯುದ್ಧದಲ್ಲಿ ಇದುವರೆಗೆ ಒಟ್ಟು 16 ಮಂದಿ ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ. ಕಳೆದ ಜೂನ್ 17 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು 14 ಅಂಶಗಳ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುದ್ಧ ವಿರಾಮ ಘೋಷಿಸಿದ್ದರು. ಆದರೆ, ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಹಡಗುಗಳನ್ನು ಇರಾನ್ ಗುರಿಯಾಗಿಸುತ್ತಿದೆ ಎಂದು ಆರೋಪಿಸಿ ಜುಲೈ 8 ರಂದು ಟ್ರಂಪ್ ಈ ಒಪ್ಪಂದ ಮುಕ್ತಾಯಗೊಂಡಿದೆ ಎಂದು ಘೋಷಿಸಿದರು. ಪರಿಣಾಮವಾಗಿ ಉಭಯ ದೇಶಗಳ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿದೆ.
ಅಮೆರಿಕಕ್ಕೆ ಇರಾನ್ ಎಚ್ಚರಿಕೆ
ಈ ದಾಳಿಗಳ ಬೆನ್ನಲ್ಲೇ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಅಮೆರಿಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಅಧ್ಯಕ್ಷರ ಸಹಿಗೆ ಯಾವುದೇ ಬೆಲೆ ಇಲ್ಲ ಮತ್ತು ಅವರ ವಿಶ್ವಾಸಾರ್ಹತೆ ಶೂನ್ಯ ಎಂದು ಅವರು ಟೀಕಿಸಿದ್ದಾರೆ.
ಅಮೆರಿಕ ಈ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಲು ಮುಂದಾದರೆ ಇರಾನ್ ಮತ್ತು ಅದರ ಮೈತ್ರಿಕೂಟವು ಅಮೆರಿಕಕ್ಕೆ ಎಂದಿಗೂ ಮರೆಯಲಾಗದ ಪಾಠ ಕಲಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಇರಾನ್‌ನ ಹಿರಿಯ ಮಿಲಿಟರಿ ಸಲಹೆಗಾರ ಮೇಜರ್ ಜನರಲ್ ಮೊಹ್ಸೆನ್ ರೆಜಾಯಿ ಮಾತನಾಡಿ, ಅಮೆರಿಕ ತನ್ನ ದಾಳಿಯನ್ನು ಮುಂದುವರಿಸಿದರೆ ಇರಾನ್ ಕೇವಲ ಪ್ರತಿದಾಳಿಗೆ ಸೀಮಿತವಾಗದೆ ಪೂರ್ಣ ಪ್ರಮಾಣದ ಆಕ್ರಮಣಕಾರಿ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಜಿಲ್ಲಾ ಪಂಚಾಯಿತಿಯಲ್ಲಿ 5 ಹುದ್ದೆಗಳ ನೇಮಕಾತಿ : ಈ ಜಿಲ್ಲೆಯವರಿಗಿದು ಒಳ್ಳೆಯ ಚಾನ್ಸ್



















