ಬೆಂಗಳೂರು : ಹಿರಿಯ ಪತ್ರಕರ್ತ, ರಾಜಕೀಯ ಚಿಂತಕ, ಲೇಖಕ, ಕನ್ನಡ ಚಲನಚಿತ್ರ ನಿರ್ದೇಶಕರೂ ಆಗಿದ್ದ ಎನ್.ಎಸ್. ಶಂಕರ್ ಅವರ ಸ್ಮರಣಾರ್ಥ “ಎನ್.ಎಸ್. ಶಂಕರ್ ಸ್ಮರಣೆ” ಎಂಬ ಕಾರ್ಯಕ್ರಮವನ್ನು ಇದೇ ಜುಲೈ 19ರಂದು (ಭಾನುವಾರ) ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದೆ. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಜಿ. ರಾಮಕೃಷ್ಣ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಗ್ರಹಾರ ಕೃಷ್ಣಮೂರ್ತಿ, ರಮೇಶ್ ಅರವಿಂದ್, ಕೋಟಿಗಾನಹಳ್ಳಿ ರಾಮಯ್ಯ, ಶ್ರೀಪಾದ ಭಟ್, ಇಂದೂಧರ ಹೊನ್ನಾಪುರ, ದಿನೇಶ್ ಅಮೀನ್ ಮಟ್ಟು, ಪ.ಸ ಕುಮಾರ್, ಯೋಗರಾಜ್ ಭಟ್, ಅರದೇಶಹಳ್ಳಿ ವೆಂಕಟೇಶ್, ಕವಿತಾ ಲಂಕೇಶ್, ವಿ.ಎಲ್. ನರಸಿಂಹಮೂರ್ತಿ, ವಿ.ಮನೋಹರ್, ವೂಡೆ ಪಿ.ಕೃಷ್ಣ, ಆರ್.ಪೂರ್ಣಿಮಾ, ಸುಷ್ಮಾ ವೀರ್, ರಾಹುಲ್ ಶಂಕರ್ ಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷರಾದ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಹಾಗೂ ಮಾಜಿ ಅಧ್ಯಕ್ಷ ಎಂ.ಎ ಪೊನ್ನಪ್ಪ ಅವರು ಕೂಡ ಉಪಸ್ಥಿತರಿರಲಿದ್ದು, ಸ್ಮರಣಾ ಕಾರ್ಯಕ್ರಮದಲ್ಲಿ ಎನ್.ಎಸ್. ಶಂಕರ್ ಅವರ ಬದುಕು, ಚಿಂತನೆ, ಬರಹ ಹಾಗೂ ಸಾಮಾಜಿಕ ಹೋರಾಟಗಳ ಕುರಿತು ಮಾತನಾಡಲಿದ್ದಾರೆ.

ಎನ್.ಎಸ್. ಶಂಕರ್ ಅವರು ನವ್ಯ ಸಂಸ್ಕಾರದ ಬರಹಗಾರ, ಸಮಾಜವಾದಿ ಚಿಂತಕ ಹಾಗೂ ನಿರಂತರ ಹೋರಾಟಗಾರರಾಗಿ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದರು. ಬಡವರು, ಕಾರ್ಮಿಕರು, ರೈತರು, ದಲಿತರು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ಪರವಾಗಿ ಧ್ವನಿಯಾಗಿದ್ದ ಅವರು, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ತಮ್ಮ ಬರಹ ಹಾಗೂ ಬದುಕಿನ ಮೂಲಕ ಪ್ರತಿಪಾದಿಸಿದ್ದರು. ಪತ್ರಿಕೆಗಳು, ವಾರಪತ್ರಿಕೆಗಳು ಹಾಗೂ ವಿವಿಧ ವೇದಿಕೆಗಳ ಮೂಲಕ ಅವರು ಸಾರ್ವಜನಿಕ ವಿಚಾರಗಳನ್ನು ನಿರ್ಭೀತಿಯಾಗಿ ಚರ್ಚಿಸಿ ಸಮಾಜದ ಗಮನ ಸೆಳೆದಿದ್ದರು.
ಚಿತ್ರರಂಗ, ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ ಮತ್ತು ಸಾಮಾಜಿಕ ಕ್ಷೇತ್ರಗಳೊಂದಿಗೆ ಆಪ್ತ ಸಂಬಂಧ ಹೊಂದಿದ್ದ ಎನ್.ಎಸ್. ಶಂಕರ್ ಅವರ ವ್ಯಕ್ತಿತ್ವವನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅವರ ಚಿಂತನೆ, ಹೋರಾಟದ ಬದುಕು ಮತ್ತು ಕನ್ನಡದ ಮೇಲಿನ ಬದ್ಧತೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಈ ಸ್ಮರಣಾ ಕಾರ್ಯಕ್ರಮದಲ್ಲಿ ನಡೆಯಲಿದ್ದು, ಸಾಹಿತ್ಯಾಸಕ್ತರು, ಪತ್ರಕರ್ತರು, ಹೋರಾಟಗಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : 2027ರ ಏಕದಿನ ವಿಶ್ವಕಪ್‌ಗೆ ಹೊಸ ಸ್ವರೂಪ.. ಭಾರತ-ಪಾಕ್ 3 ಬಾರಿ ಮುಖಾಮುಖಿ ಸಾಧ್ಯತೆ!


















