ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಒಸ್ಸೂರು ಎಸ್ಟೇಟ್‌ನಲ್ಲಿ ಜನರ ಪ್ರೀತಿಗೆ ಪಾತ್ರವಾಗಿರುವ ಸೌಮ್ಯ ಸ್ವಭಾವದ ಕಾಡಾನೆ ಭೀಮನ ಮೇಲೆ ಅಸ್ಸಾಂ ಮೂಲದ ಕಾರ್ಮಿಕನೊಬ್ಬ ಕಲ್ಲು ತೂರಿ ಹಿಂಸೆ ನೀಡಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದಿರುವ ಕಾರ್ಮಿಕರಿಗೆ ಎಸ್ಟೇಟ್ ಮಾಲೀಕರು ಲೈನ್ ಮನೆಗಳನ್ನು ವಾಸಕ್ಕೆ ನೀಡಿದ್ದರು. ಇಂದು ಬೆಳಿಗ್ಗೆ ಕಾರ್ಮಿಕರ ಮನೆಯ ಮುಂಭಾಗದ ರಸ್ತೆಯಲ್ಲಿ ಕಾಡಾನೆ ಭೀಮ ತನ್ನ ಪಾಡಿಗೆ ತಾನು ನಿಧಾನವಾಗಿ ಸಾಗುತ್ತಿದ್ದ ವೇಳೆ, ಕಾರ್ಮಿಕನೊಬ್ಬ ಪದೇ ಪದೇ ಕಲ್ಲು ತೂರಿ ಕೀಟಲೆ ಮಾಡಿದ್ದಾನೆ.
ಕಲ್ಲು ತೂರಿದ್ದರಿಂದ ಕೋಪಗೊಂಡ ಭೀಮ ಘೀಳಿಡುತ್ತಾ ಕಾರ್ಮಿಕನತ್ತ ನುಗ್ಗಲು ಯತ್ನಿಸಿದೆ. ಆದರೆ ಯಾವುದೇ ಅನಾಹುತ ಸಂಭವಿಸದೆ ಕಾರ್ಮಿಕ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ. ಯಾರಿಗೂ ತೊಂದರೆ ಕೊಡದ ಸೌಮ್ಯ ಸ್ವಭಾವದ ಆನೆಯನ್ನು ಉದ್ದೇಶಪೂರ್ವಕವಾಗಿ ಹಿಂಸಿಸಿರುವುದು ಖಂಡನೀಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲೆನಾಡು ಭಾಗದ ಜನರ ಪ್ರೀತಿಗೆ ಪಾತ್ರವಾಗಿರುವ ಕಾಡಾನೆ ಭೀಮನಿಗೆ ಕಲ್ಲು ತೂರಿದ ಕಾರ್ಮಿಕನ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : DCP ಹೆಸರಲ್ಲೇ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ ; ಕಡಿಮೆ ದರದ ಆಮಿಷಕ್ಕೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಜನ!



















