ಬೆಂಗಳೂರು: ಕಳೆದ ಎರಡು ದಿನಗಳಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಇಳಿಕೆ ಕಂಡಿದೆ. ಶನಿವಾರ (ಜುಲೈ 11) ಒಂದೇ ದಿನ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 490 ರೂಪಾಯಿ ಇಳಿಕೆಯಾಗಿದೆ. ಇದೇ ರೀತಿ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 450 ರೂಪಾಯಿ ಇಳಿಕೆಯಾಗಿದೆ. ಹಾಗಾಗಿ, ಶನಿವಾರ ಚಿನ್ನ ಖರೀದಿಸುವವರಲ್ಲಿ ಸ್ವಲ್ಪ ನಿರಾಳ ಭಾವ ಮೂಡಿದೆ.
ಬೆಂಗಳೂರಿನಲ್ಲಿ ಶನಿವಾರ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರವು 14,433 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ, 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರವು 13,230 ರೂಪಾಯಿಗೆ ಇಳಿಕೆಯಾಗಿದೆ. ಅಮೆರಿಕ ಹಾಗೂ ಇರಾನ್ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿರುವ ಕಾರಣ ಜುಲೈ 9 ಹಾಗೂ ಜುಲೈ 10ರಂದು ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಕೆಯಾಗಿತ್ತು. ಇದರಿಂದಾಗಿ ಚಿನ್ನ ಖರೀದಿಸುವವರಲ್ಲಿ ಆತಂಕ ಮನೆಮಾಡಿತ್ತು.
ಕಳೆದ 10 ದಿನಗಳಲ್ಲಿ ಬಂಗಾರದ ಧಾರಣೆಯು 4 ಬಾರಿ ಏರಿಕೆಯಾಗಿದೆ. ಐದು ಬಾರಿ ಬೆಲೆ ಇಳಿಕೆ ಕಂಡಿದೆ. ಒಮ್ಮೆ ಮಾತ್ರ ಧಾರಣೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜಾಗತಿಕವಾಗಿ ಅನಿಶ್ಚಿತತೆ ಮುಂದುವರಿದಿರುವ ಕಾರಣ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಬಹುದು ಎಂದೇ ಹೇಳಲಾಗುತ್ತಿದೆ.
ಬೆಳ್ಳಿ ಧಾರಣೆಯಲ್ಲೂ ಇಳಿಕೆ
ಚಿನ್ನದಂತೆ ಬೆಳ್ಳಿಯ ಬೆಲೆಯಲ್ಲೂ ಶನಿವಾರ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 1 ಕೆ.ಜಿ ಚಿನ್ನದ ಬೆಲೆಯಲ್ಲಿ 5 ಸಾವಿರ ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಒಂದು ಕೆ.ಜಿ ಬೆಳ್ಳಿಯ ಬೆಲೆಯು 2.35 ಲಕ್ಷ ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಕಳೆದ 10 ದಿನಗಳಲ್ಲಿ 3 ಬಾರಿ ಇಳಿಕೆಯಾದರೆ, 3 ಬಾರಿ ಏರಿಕೆಯಾಗಿದೆ. ನಾಲ್ಕು ದಿನ ಯಾವುದೇ ಬದಲಾವಣೆ ಆಗಿರಲಿಲ್ಲ.



















