ಹೈದರಾಬಾದ್: ಭೀಕರ ಹಾಗೂ ನಡುಕ ಹುಟ್ಟಿಸುವ ಸರಣಿ ಕೊಲೆ ಪ್ರಕರಣವೊಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್‌ನಲ್ಲಿ ಬೆಳಕಿಗೆ ಬಂದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದ 35 ವರ್ಷದ ರಾಜಕುಮಾರ್ ಎಂಬಾತ, ತನ್ನ ಪತ್ನಿ, ಇಬ್ಬರು ಮುಗ್ಧ ಮಕ್ಕಳು ಹಾಗೂ ತನ್ನ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಅಪ್ರಾಪ್ತೆ ಸೇರಿದಂತೆ ಒಟ್ಟು ಆರು ಜನರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಜಾಮೀನಿನ ಮೇಲಿದ್ದ ಆರೋಪಿ ರಾಜಕುಮಾರ್ ಶುಕ್ರವಾರ ರಾತ್ರಿ ಶಾಬಾದ್‌ನಲ್ಲಿರುವ ತನ್ನ ನಿವಾಸದಲ್ಲಿ ತನ್ನ 30 ವರ್ಷದ ಪತ್ನಿ ಪಾರ್ವತಿ ಸರಿತಾ, ನಾಲ್ಕು ವರ್ಷ ಹಾಗೂ ಒಂದು ವರ್ಷದ ಇಬ್ಬರು ಗಂಡು ಮಕ್ಕಳನ್ನು ಕೊಲೆಗೈದಿದ್ದಾನೆ. ಇಬ್ಬರು ಮಕ್ಕಳು ನಿದ್ದೆಯಲ್ಲೇ ಹೆಣವಾದರೆ, ಪತ್ನಿ ಬಿದ್ದಿದ್ದ ಕೋಣೆಯಲ್ಲಿ ತೀವ್ರ ಘರ್ಷಣೆ ನಡೆದಿರುವ ಕುರುಹುಗಳು ಪತ್ತೆಯಾಗಿವೆ. ಕೊಲೆಯ ಬಳಿಕ ಮನೆಯ ಒಳಗಿನಿಂದ ಚಿಲಕ ಹಾಕಿ, ಫ್ಯಾನ್ ಮತ್ತು ಎಸಿ ಆನ್ ಮಾಡಿ ಆರೋಪಿ ಹೊರಟು ಹೋಗಿದ್ದಾನೆ. 2018ರಲ್ಲಿ ಪ್ರೇಮ ವಿವಾಹವಾಗಿದ್ದ ಈ ದಂಪತಿಯ ಮಧ್ಯೆ ಯಾವುದೇ ಕೌಟುಂಬಿಕ ಕಲಹಗಳಿರಲಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
ದೂರು ನೀಡಿದ್ದ ಅಪ್ರಾಪ್ತೆ, ಕುಟುಂಬದ ಬೇಟೆ
ಪತ್ನಿ, ಮಕ್ಕಳನ್ನು ಕೊಲೆಗೈದ ಬಳಿಕ ರಾಜಕುಮಾರ್ ತನ್ನ ಹಳೆಯ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ನೇರವಾಗಿ, ಮೇ ತಿಂಗಳಲ್ಲಿ ತನ್ನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ದೂರು ದಾಖಲಿಸಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯ ಮನೆಗೆ ತೆರಳಿದ್ದಾನೆ. ಆಕೆಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, ಬಾಲಕಿಯ 45 ವರ್ಷದ ತಾಯಿ ಹಾಗೂ 65 ವರ್ಷದ ಅಜ್ಜಿಯನ್ನೂ ಹತ್ಯೆ ಮಾಡಿದ್ದಾನೆ. ಘಟನೆಯ ವೇಳೆ ಮನೆಯಲ್ಲಿದ್ದ ಬಾಲಕಿಯ 20 ವರ್ಷದ ವಿಕಲಾಂಗ ಸಹೋದರಿಯನ್ನು ಮಾತ್ರ ಆತ ಮುಟ್ಟಿಲ್ಲ.
ತಂದೆಗೆ ಫೋನ್ ಮಾಡಿ ಕೊಲೆ ಒಪ್ಪಿಕೊಂಡ ಪಾಪಿ
ಈ ಭೀಕರ ಕೃತ್ಯ ಎಸಗಿದ ನಂತರ ರಾಜಕುಮಾರ್ ತನ್ನ ತಂದೆಗೆ ಫೋನ್ ಕರೆ ಮಾಡಿ, “ನಾನು ಈ ಎಲ್ಲ ಜನರನ್ನು ಕೊಂದಿದ್ದೇನೆ” ಎಂದು ತಿಳಿಸಿದ್ದಾನೆ. ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತರುಣ್ ಜೋಶಿ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.
ಏನಿದು ಹಳೆಯ ಪ್ರಕರಣ?
ಕೋಚಿಂಗ್ ಕ್ಲಾಸ್ ಮುಗಿಸಿ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ, ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ರಾಜಕುಮಾರ್ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 16 ರಂದು ಬಾಲಕಿ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಈತನಿಗೆ, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಿರುವ ಕಾರಣ, ಕೇವಲ ಒಂದು ವಾರದ ಹಿಂದಷ್ಟೇ ಕೋರ್ಟ್ 20,000 ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಮುಂಗಡ ಜಾಮೀನು ನೀಡಿತ್ತು. ಜೂಜಿನ ಚಟ ಹಾಗೂ ಸಾಲದ ಸುಳಿಗೆ ಸಿಲುಕಿದ್ದ ಆರೋಪಿ ಮಾನಸಿಕವಾಗಿ ಅಸ್ಥಿರನಾಗಿದ್ದ ಎಂದು ಆತನ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಶವಾಗಾರ ಪೇಂಟಿಂಗ್ ವೇಳೆ ವಿದ್ಯುತ್ ಶಾಕ್ : ಪೆಂಟರ್ ಜೀವನ್ಮರಣ ಹೋರಾಟ



















