ರಾಂಚಿ : ಜಾರ್ಖಂಡ್‌ನ ಗಢ್ವಾ ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಅಭಿಯಾನದ ವೇಳೆ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ವಿರುದ್ಧ ಲಂಚ ಕೇಳಿದ ಆರೋಪ ಕೇಳಿಬಂದಿದೆ. ಮತದಾರರ ಪರಿಶೀಲನೆಗಾಗಿ ಭರ್ತಿ ಮಾಡಬೇಕಾದ ಎಸ್‌ಐಆರ್ ಫಾರ್ಮ್‌ಗಳನ್ನು ನೀಡಲು, ಭರ್ತಿ ಮಾಡಿಸಲು ಹಾಗೂ ಸಲ್ಲಿಸಲು 50ರಿಂದ 100 ರೂಪಾಯಿವರೆಗೆ ಹಣ ಕೇಳಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಖರ್ಚು-ಪಾನಿ’ ಹೆಸರಿನಲ್ಲಿ ಹಣ ಕೇಳಿದ ಆರೋಪ
ಗಢ್ವಾ ಜಿಲ್ಲೆಯ ರಂಕಾ ಬ್ಲಾಕ್ ವ್ಯಾಪ್ತಿಯ ಖಪ್ರೋ ಪಂಚಾಯತ್‌ನ ಗೊರಾಯಬಾಂದ್ ಟೋಲಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಲ್‌ಒ ಜಮೀಲಾ ಬಿಬಿ ವಿರುದ್ಧ ಈ ಆರೋಪ ಕೇಳಿಬಂದಿದೆ. ವೈರಲ್ ವಿಡಿಯೋದಲ್ಲಿ ಅವರು ನೇರವಾಗಿ ಶುಲ್ಕ ಎಂದು ಹೇಳದೇ, ‘ಖರ್ಚು-ಪಾನಿ’ ಹೆಸರಿನಲ್ಲಿ 50ರಿಂದ 100 ರೂಪಾಯಿ ನೀಡುವಂತೆ ಕೇಳುತ್ತಿರುವುದು ಕೇಳಿಬಂದಿದೆ ಎಂದು ಆರೋಪಿಸಲಾಗಿದೆ. ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳೂ ಉಚಿತವಾಗಿದ್ದರೂ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿಬಂದಿವೆ.
‘ಹಣ ಕೊಡದಿದ್ದರೆ ಪೌರತ್ವ ಕಸಿದುಕೊಳ್ಳುತ್ತೇವೆ’
ವಿಡಿಯೋ ವೈರಲ್ ಆದ ಬಳಿಕ ಸ್ಥಳಕ್ಕೆ ತೆರಳಿದ ಮಾಧ್ಯಮಗಳೊಂದಿಗೆ ಮಾತನಾಡಿದ ಹಲವಾರು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. “ಫಾರ್ಮ್ ಭರ್ತಿ ಮಾಡಲು ಸುಮಾರು 50 ರೂಪಾಯಿ ಕೇಳಲಾಗುತ್ತಿದೆ.
ಯಾರಾದರೂ ಹಣ ಕೊಡಲು ನಿರಾಕರಿಸಿದರೆ, ‘ನಿಮ್ಮ ಪೌರತ್ವ ಕಸಿದುಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಲಾಗುತ್ತಿದೆ” ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಪರ್ವೇಜ್ ಅನ್ಸಾರಿ ಆರೋಪಿಸಿದ್ದಾರೆ. ಇನ್ನೂ ಹಲವರು ಈಗಾಗಲೇ ಫಾರ್ಮ್ ಭರ್ತಿ ಮಾಡಿದ್ದರೂ ಹಣ ನೀಡಬೇಕಾಗಿರುವ ಕಾರಣ ಅವುಗಳನ್ನು ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಿಎಲ್‌ಒ ಅವರ ನಿವಾಸದ ಹೊರಗೆ ಸಾಕಷ್ಟು ಜನರು ಎಸ್‌ಐಆರ್ ಫಾರ್ಮ್‌ಗಳೊಂದಿಗೆ ಕಾಯುತ್ತಿರುವ ದೃಶ್ಯವೂ ಕಂಡುಬಂದಿದೆ.
ಆರೋಪಗಳನ್ನು ತಳ್ಳಿ ಹಾಕಿದ ಬಿಎಲ್‌ಒ
ಈ ಎಲ್ಲ ಆರೋಪಗಳನ್ನು ಬಿಎಲ್‌ಒ ಜಮೀಲಾ ಬೀಬಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಷಡ್ಯಂತ್ರ ರೂಪಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದುವರೆಗೆ ಸುಮಾರು 170 ಎಸ್‌ಐಆರ್ ಫಾರ್ಮ್‌ಗಳನ್ನು ಯಶಸ್ವಿಯಾಗಿ ಪ್ರಕ್ರಿಯೆಗೊಳಿಸಿದ್ದೇನೆ. ನನ್ನ ಕೆಲಸದ ಬಗ್ಗೆ ಯಾವುದೇ ಅನುಮಾನವಿದ್ದರೆ ಫಲಾನುಭವಿಗಳನ್ನೇ ಕೇಳಬಹುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಅವರು ಹೇಳಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ಕುರಿತು ಆತಂಕ
ಈ ಘಟನೆ ಎಸ್‌ಐಆರ್ ಪ್ರಕ್ರಿಯೆಯ ಪಾರದರ್ಶಕತೆ ಕುರಿತ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮತದಾರರ ಪಟ್ಟಿಯನ್ನು ನವೀಕರಿಸುವ ಈ ಅಭಿಯಾನ ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಹಣ ವಸೂಲಿ ಮಾಡಬಾರದು ಎಂಬುದು ಚುನಾವಣಾ ಆಯೋಗದ ನಿಯಮವಾಗಿದೆ. ಆದರೆ ವೈರಲ್ ವಿಡಿಯೋ ಬಳಿಕ ಗ್ರಾಮಸ್ಥರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಮತದಾರರಲ್ಲಿ ಗೊಂದಲ ನಿವಾರಣೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಚುನಾವಣಾ ಅಧಿಕಾರಿಗಳು ಮತ್ತಷ್ಟು ಬಲಪಡಿಸುತ್ತಿದ್ದಾರೆ.
ಇದನ್ನೂ ಓದಿ : ಜೈಪುರ ಶಾಲಾ ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ಹೊಸ ತಿರುವು : ಸಿಸಿಟಿವಿ ದೃಶ್ಯ ಬಹಿರಂಗ



















