ಬೆಂಗಳೂರು : ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಪರ್ಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆ ಕೊಮಾಕಿ ಎಲೆಕ್ಟ್ರಿಕ್ ತನ್ನ ಹೊಸ MG Pro V ಹಾಗೂ MG Pro+ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಕೂಟರ್‌ಗಳ ಪ್ರಮುಖ ವಿಶೇಷತೆ ಎಂದರೆ, ಈ ಬೆಲೆ ವಿಭಾಗದಲ್ಲಿ ಅಪರೂಪವಾಗಿರುವ ಸಂಪೂರ್ಣ ಮೆಟಲ್ ಬಾಡಿಯನ್ನು ಹೊಂದಿರುವುದು. ಸಾಮಾನ್ಯವಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಫೈಬರ್ ಬಾಡಿಯನ್ನು ಬಳಸಲಾಗುತ್ತದೆ. ಆದರೆ ಹೆಚ್ಚಿನ ಬಾಳಿಕೆ ಹಾಗೂ ಭಾರತೀಯ ರಸ್ತೆ ಪರಿಸ್ಥಿತಿಗೆ ಸೂಕ್ತವಾಗುವಂತೆ ಈ ಮಾದರಿಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಬೆಲೆ ಎಷ್ಟು?
ಹೊಸ MG Pro V ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್‌ಶೋರೂಂ ಬೆಲೆ 73,999 ರೂಪಾಯಿ ಆಗಿದ್ದರೆ, MG Pro+ ಮಾದರಿಯ ಬೆಲೆ 79,999 ರೂಪಾಯಿ ನಿಗದಿಯಾಗಿದೆ. ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಬಾಳಿಕೆ, ಉತ್ತಮ ರೇಂಜ್ ಹಾಗೂ ಆಧುನಿಕ ತಂತ್ರಜ್ಞಾನವನ್ನು ನೀಡುವ ಗುರಿಯೊಂದಿಗೆ ಈ ಮಾದರಿಗಳನ್ನು ಕೊಮಾಕಿ ಪರಿಚಯಿಸಿದೆ.
150 ಕಿ.ಮೀ.ವರೆಗೆ ರೇಂಜ್
MG Pro V ಸ್ಕೂಟರ್‌ನಲ್ಲಿ 2.2 kWh LiFePO4 ಬ್ಯಾಟರಿ ನೀಡಲಾಗಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 90 ರಿಂದ 100 ಕಿಲೋಮೀಟರ್‌ವರೆಗೆ ಸಂಚರಿಸಬಹುದು ಎಂದು ಕಂಪನಿ ಹೇಳಿದೆ. ಇನ್ನೊಂದೆಡೆ MG Pro+ ಮಾದರಿಯಲ್ಲಿ 2.7 kWh LiFePO4 ಬ್ಯಾಟರಿ ಇದ್ದು, 150 ಕಿಲೋಮೀಟರ್‌ಗಿಂತ ಹೆಚ್ಚು ರೇಂಜ್ ನೀಡುತ್ತದೆ ಎಂದು ಕಂಪನಿ ಘೋಷಿಸಿದೆ. ಎರಡೂ ಮಾದರಿಗಳಲ್ಲೂ BLDC ಹಬ್ ಮೋಟಾರ್ ಅಳವಡಿಸಲಾಗಿದ್ದು, ಸುಮಾರು 60 ಕಿ.ಮೀ. ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿವೆ. ಚಾರ್ಜ್ ಮಾಡಲು ಸರಾಸರಿ ನಾಲ್ಕು ಗಂಟೆಗಳ ಸಮಯ ಬೇಕಾಗುತ್ತದೆ.
ಸುರಕ್ಷತೆ ಮತ್ತು ಆಧುನಿಕ ಫೀಚರ್‌ಗಳು
ಈ ಎರಡೂ ಸ್ಕೂಟರ್‌ಗಳಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ವ್ಯವಸ್ಥೆ ನೀಡಲಾಗಿದೆ. ಜೊತೆಗೆ ಸಂಪೂರ್ಣ LED ಲೈಟಿಂಗ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮೊಬೈಲ್ ಆ್ಯಪ್ ಕನೆಕ್ಟಿವಿಟಿ, ಬ್ಯಾಟರಿ ಆರೋಗ್ಯ ಹಾಗೂ ರೇಂಜ್ ಮಾನಿಟರಿಂಗ್, ಆಂಟಿ-ಥೆಫ್ಟ್ ಲಾಕ್, ಪಾರ್ಕಿಂಗ್ ಅಸಿಸ್ಟ್, ರಿಪೇರ್ ಸ್ವಿಚ್ ಹಾಗೂ ಕೀಲೆಸ್ ಸ್ಟಾರ್ಟ್‌ನಂತಹ ಹಲವು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. MG Pro+ ಮಾದರಿಯಲ್ಲಿ ದೊಡ್ಡ ಅಂಡರ್‌ಸೀಟ್ ಸ್ಟೋರೇಜ್ ಕೂಡ ಲಭ್ಯವಿದೆ.
ಬಾಳಿಕೆ ಮೇಲೆ ಕಂಪನಿಯ ಒತ್ತು
ಈ ಸ್ಕೂಟರ್‌ಗಳ ಬಿಡುಗಡೆ ವೇಳೆ ಮಾತನಾಡಿದ ಕೊಮಾಕಿ ಸಹ-ಸಂಸ್ಥಾಪಕಿ ಗುಂಜನ್ ಮಲ್ಹೋತ್ರಾ, ಕಡಿಮೆ ಬೆಲೆ ಎಂದರೆ ಗುಣಮಟ್ಟದಲ್ಲಿ ರಾಜಿ ಎಂದರ್ಥವಲ್ಲ ಎಂದು ಹೇಳಿದರು. ದುಬಾರಿ ವಾಹನಗಳಲ್ಲಿ ಮಾತ್ರ ಸಿಗುವ ಮೆಟಲ್ ಬಾಡಿ ಮತ್ತು ದೀರ್ಘಕಾಲ ಬಾಳಿಕೆ ಬರುವ LiFePO4 ಬ್ಯಾಟರಿಯನ್ನು ಸಾಮಾನ್ಯ ಗ್ರಾಹಕರಿಗೂ ಕೈಗೆಟುಕುವ ಬೆಲೆಯಲ್ಲಿ ನೀಡುವ ಉದ್ದೇಶದಿಂದ ಈ ಸ್ಕೂಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು. ಭಾರತೀಯ ರಸ್ತೆಗಳ ಕಠಿಣ ಪರಿಸ್ಥಿತಿಯಲ್ಲೂ ಉತ್ತಮ ಬಾಳಿಕೆ ನೀಡುವ ವಾಹನಗಳನ್ನು ಒದಗಿಸುವುದು ಕಂಪನಿಯ ಗುರಿಯಾಗಿದೆ ಎಂದು ಅವರು ಹೇಳಿದರು.
ಯಾರಿಗಾಗಿ ಈ ಸ್ಕೂಟರ್?
ನಗರ ಪ್ರದೇಶದಲ್ಲಿ ಪ್ರತಿದಿನ ಸಂಚಾರ ಮಾಡುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಉತ್ತಮ ರೇಂಜ್ ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು MG Pro V ಮತ್ತು MG Pro+ ಅನ್ನು ರೂಪಿಸಲಾಗಿದೆ. ಕೈಗೆಟುಕುವ ಬೆಲೆಯಲ್ಲಿ ಮೆಟಲ್ ಬಾಡಿ, ದೀರ್ಘ ರೇಂಜ್ ಹಾಗೂ ಆಧುನಿಕ ಸೌಲಭ್ಯಗಳನ್ನು ನೀಡುವ ಮೂಲಕ ಬಜೆಟ್ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ವಿಶ್ವಾಸವನ್ನು ಕೊಮಾಕಿ ವ್ಯಕ್ತಪಡಿಸಿದೆ.
ಇದನ್ನೂ ಓದಿ : 2027ರಲ್ಲಿ ಬರಲಿದೆ 7 ಸೀಟರ್ ನಿಸ್ಸಾನ್ ಟೆಕ್ಟನ್ ; ಎಕ್ಸ್‌ಯುವಿ700, ಸಫಾರಿಗೆ ನೇರ ಸವಾಲು!



















