ಬೆಂಗಳೂರು : ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಗಳ (Central Autonomous Bodies – CABs) ನೌಕರರಿಗಾಗಿ ಸರ್ಕಾರವು ಎರಡು ಹೊಸ ಹೂಡಿಕೆ ಆಯ್ಕೆಗಳನ್ನು ವಿಸ್ತರಿಸಿದೆ. ಈ ಆಯ್ಕೆಗಳು ಈ ಹಿಂದೆ ಕೇವಲ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದ್ದವು. ಈಗ ಸ್ವಾಯತ್ತ ಸಂಸ್ಥೆಗಳ ನೌಕರರಿಗೂ ಅನ್ವಯವಾಗುತ್ತಿದ್ದು, ಅವರು ಹೂಡಿಕೆ ಮಾಡಲು ಎರಡು ಹೊಸ ಆಯ್ಕೆಗಳನ್ನು ಪಡೆದಿದ್ದಾರೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ನೋಂದಣಿಯಾದ ಸ್ವಾಯತ್ತ ಸಂಸ್ಥೆಗಳ ನೌಕರರು ಈಗ ಹೂಡಿಕೆಗೆ ಎರಡು ಆಯ್ಕೆ ಪಡೆದಿದ್ದಾರೆ. ಹೊಸ ನಿಯಮಗಳ ಪ್ರಕಾರ, ನೌಕರರು ಅಗ್ರೆಸ್ಸಿವ್ ಲೈಫ್ ಸೈಕಲ್ ಫಂಡ್ ಅಥವಾ ಎಲ್ ಸಿ 75 ಹೈ ಫಂಡ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ಶೇ.75ರಷ್ಟು ಮೊತ್ತವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ.
ಎರಡನೇ ಆಯ್ಕೆಯಲ್ಲಿ, ಬ್ಯಾಲೆನ್ಸ್ಡ್ ಲೈಫ್ ಸೈಕಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ಶೇ.50ರಷ್ಟು ಮೊತ್ತವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಅಪಾಯವನ್ನು ತಗ್ಗಿಸುವ ದೃಷ್ಟಿಯಿಂದ ಇದರಲ್ಲಿ ಉದ್ಯೋಗಿಗಳಿಗೆ 45 ವರ್ಷ ತುಂಬಿದ ಬಳಿಕ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗುವ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದೆ.
ಎನ್ ಪಿಎಸ್ ಚಂದಾದಾರರಿಗೆ ತಮ್ಮ ನಿವೃತ್ತಿ ಯೋಜನೆಯನ್ನು ಸುಧಾರಿಸಲು ಹೆಚ್ಚಿನ ನಮ್ಯತೆ ಅಥವಾ ಫ್ಲೆಕ್ಸಿಬಿಲಿಟಿಯನ್ನು ನೀಡುವುದು ಯೋಜನೆಯ ಉದ್ದೇಶವಾಗಿದೆ. ನೌಕರರು ತಮ್ಮ ವೈಯಕ್ತಿಕ ಹಣಕಾಸಿನ ಗುರಿ ಮತ್ತು ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ (Risk Appetite) ಅನುಗುಣವಾಗಿ ಹೂಡಿಕೆ ಮಾಡಲು ಅವಕಾಶ ನೀಡುವುದು ಕೂಡ ಗುರಿಯಾಗಿದೆ. ಇದರಿಂದ ನೌಕರರು ನಿವೃತ್ತಿಯ ಬಳಿಕ ಹೆಚ್ಚಿನ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ರಾಜ್ಯ ಅಬಕಾರಿ ಇಲಾಖೆಯಲ್ಲಿ 1,207 ಹುದ್ದೆಗಳ ನೇಮಕಾತಿ : 58 ಸಾವಿರ ರೂ. ಸಂಬಳ



















