ಚಾಮರಾಜನಗರ : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ರೀಲ್ಸ್ ಸ್ಟಾರ್ ಶಿಲ್ಪಾ ಗೌಡ ಕಾಡಾನೆಯ ತೀರಾ ಸಮೀಪ ನಿಂತು ರೀಲ್ಸ್ ಶೂಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲೈಕ್ಸ್ ಮತ್ತು ವೀವ್ಸ್‌ಗಾಗಿ ಜೀವವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡಿರುವ ಈ ಘಟನೆ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಶಿಲ್ಪಾ ಗೌಡ ಕಾಡಾನೆಯ ಹತ್ತಿರ ನಿಂತು ವಿಡಿಯೋ ಚಿತ್ರೀಕರಿಸಿರುವುದು ಕಂಡುಬಂದಿದೆ.
ಪ್ರತಿ ದಿನ ಕಾಡಾನೆಗಳು ಬರುವ ಸಮಯದಲ್ಲಿ ಪ್ರವಾಸಿಗರನ್ನು ಸುರಕ್ಷತೆಯ ದೃಷ್ಟಿಯಿಂದ ಹೊರಗೆ ಕಳುಹಿಸುವ ಕ್ರಮವನ್ನು ಅರಣ್ಯ ಇಲಾಖೆ ಅನುಸರಿಸುತ್ತದೆ. ಆದರೆ, ಶಿಲ್ಪಾ ಗೌಡಗೆ ಕಾಡಾನೆ ಇಷ್ಟು ಹತ್ತಿರ ಹೋಗಿ ವಿಡಿಯೋ ಚಿತ್ರೀಕರಿಸಲು ಹೇಗೆ ಅವಕಾಶ ಸಿಕ್ಕಿತು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಘಟನೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಏಕೆ ಮಧ್ಯಪ್ರವೇಶಿಸಿಲ್ಲ. ಸಾಮಾನ್ಯ ಪ್ರವಾಸಿಗರಿಗೆ ಒಂದು ನಿಯಮ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವವರಿಗೆ ಮತ್ತೊಂದು ನಿಯಮವೇ ಎಂಬ ಪ್ರಶ್ನೆಯನ್ನು ಸ್ಥಳೀಯರು, ಪರಿಸರ ಪ್ರೇಮಿಗಳು ಎತ್ತಿದ್ದಾರೆ.
ಈ ಘಟನೆ ಹಿನ್ನೆಲೆ ಶಿಲ್ಪಾ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದರೆ ಸಂಬಂಧಪಟ್ಟ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ರಾಮಮಂದಿರ ದೇಣಿಗೆ ಲೂಟಿ ಕೇಸ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಲಿ ; ವಿನಯ್ ಕುಮಾರ್ ಸೊರಕೆ



















