ಬೆಂಗಳೂರು : ಬಡತನದ ಕಾರಣದಿಂದಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಸ್ಕಾಲರ್ ಶಿಪ್, ಸಾಲ ಯೋಜನೆಯನ್ನು ರೂಪಿಸಿವೆ. ಹಾಗೆಯೇ, ಖಾಸಗಿ ಸಂಸ್ಥೆಗಳು ಕೂಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಟಿವಿಎಸ್ ಮೋಟರ್ಸ್ ಕಂಪನಿಯು ಟಿವಿಎಸ್ ಚೀಮಾ ಸ್ಕಾಲರ್ ಶಿಪ್ (TVS Cheema Scholarship) ಎಂಬ ಯೋಜನೆ ಆರಂಭಿಸಿದೆ. ಇದರ ಅನ್ವಯ, ವಿದ್ಯಾರ್ಥಿಗಳಿಗೆ ಬಡ್ಡಿರಹಿತವಾಗಿ ಸಾಲ ನೀಡಲಾಗುತ್ತಿದೆ.
ಕರ್ನಾಟಕ ಹಾಗೂ ತಮಿಳುನಾಡಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಎಂಜಿನಿಯರಿಂಗ್, ಡಿಪ್ಲೋಮಾ ಹಾಗೂ ನರ್ಸಿಂಗ್ ಓದುವವರಿಗೆ ಇದರಿಂದ ಭಾರಿ ಅನುಕೂಲವಾಗಲಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವವರು ಅರ್ಜಿಗಳನ್ನು ಸಲ್ಲಿಸುವ ಮೂಲಕ ಸಾಲದ ಸೌಲಭ್ಯ ಪಡೆಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ.
ಅರ್ಹತೆಗಳು ಏನೇನು?
ವಿದ್ಯಾರ್ಥಿಗಳು ಕಡ್ಡಾಯವಾಗಿ ತಮಿಳುನಾಡು ಅಥವಾ ಕರ್ನಾಟಕದವರಾಗಿರಬೇಕು. ಎಂಜಿನಿಯರಿಂಗ್ (ಸ್ನಾತಕೋತ್ತರ ಪದವಿ), ನರ್ಸಿಂಗ್ ಅಥವಾ ಡಿಪ್ಲೊಮಾ ಕೋರ್ಸ್ ಗಳಿಗೆ ಪ್ರವೇಶ ಪಡೆದಿರಬೇಕು. ಎಂಜಿನಿಯರಿಂಗ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು. ಡಿಪ್ಲೊಮಾ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು ಎಂದು ತಿಳಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದವರಿಗೆ, ಉನ್ನತ ಶಿಕ್ಷಣ ಪಡೆಯಲು ಆಗದವರಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಹಾಗಾಗಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ಡಿಪ್ಲೊಮಾ ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯರ್ಥಿಗಳು https://www.tvscsf.com/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳ ಅಂಕಪಟ್ಟಿ, ಕುಟುಂಬದ ವಾರ್ಷಿಕ ಆದಾಯದ ದೃಢೀಕರಣಕ್ಕಾಗಿ ಐಟಿಆರ್ ಸಲ್ಲಿಕೆ ಸ್ಟೇಟ್ ಮೆಂಟ್, ಸ್ಯಾಲರಿ ಸ್ಲಿಪ್, ರೇಷನ್ ಕಾರ್ಡ್, ಆದಾಯ ಪ್ರಮಾಣಪತ್ರ, ಗ್ರಾಮ ಪಂಚಾಯಿತಿಯಿಂದ ಪಡೆದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ಬ್ಯಾಂಕ್ ಆಫ್ ಬರೋಡಾದ BGSSL ಸಂಸ್ಥೆಯಲ್ಲಿ 438 ಹುದ್ದೆಗಳ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ



















