ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದ ಕ್ರೀಡಾ ಮೈದಾನದಲ್ಲಿರುವ ಬಯಲು ರಂಗಮಂದಿರವನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಫುಡ್ ಸ್ಟ್ರೀಟ್ ನಿರ್ಮಿಸಲು ನಗರಸಭೆ ಕೈಗೊಂಡಿರುವ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಯಾವುದೇ ಕಾರಣಕ್ಕೂ ಬಯಲು ರಂಗಮಂದಿರವನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಲಾಗಿದೆ.

ಮನವಿಯಲ್ಲಿ, ಹಲವು ವರ್ಷಗಳಿಂದ ಬಯಲು ರಂಗಮಂದಿರವು ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪ್ರಮುಖ ವೇದಿಕೆಯಾಗಿ ಸೇವೆ ಸಲ್ಲಿಸುತ್ತಿದ್ದು, ಅದನ್ನು ತೆರವುಗೊಳಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗುತ್ತದೆ ಎಂದು ತಿಳಿಸಲಾಗಿದೆ.
ಅಲ್ಲದೆ, ಫುಡ್ ಸ್ಟ್ರೀಟ್ ನಿರ್ಮಾಣವಾದರೆ ರಾತ್ರಿ ವೇಳೆ ಜನಸಂದಣಿ ಹೆಚ್ಚಾಗಿ, ಮದ್ಯಪಾನ ಸೇರಿದಂತೆ ಸಮಾಜ ವಿರೋಧಿ ಚಟುವಟಿಕೆಗಳಿಗೆ ಅವಕಾಶವಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ವ್ಯಕ್ತಪಡಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಸಮೀಪದಲ್ಲಿರುವ ಬಾಲಕಿಯರ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ ಬಯಲು ರಂಗಮಂದಿರವನ್ನು ಸಂರಕ್ಷಿಸಿ, ಫುಡ್ ಸ್ಟ್ರೀಟ್ ನಿರ್ಮಾಣದ ಪ್ರಸ್ತಾವನೆಯನ್ನು ತಕ್ಷಣ ಕೈಬಿಡುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಲಾಗಿದೆ. ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಶಂಕರ ಪೂಜಾರಿ, ಮುತ್ತಣ್ಣ ಈಳಿಗೇರ, ಹಸೇನ್ಸಾಬ್, ಶರಣು ನಾಯಕ, ಪುಂಡಲಿಕ್, ಪುನಿತ್ ಪೂಜಾರಿ, ಅಂಜಿನಪ್ಪ, ಉಮೇಶ್ ಬಂಡಿ, ಬಾಷಾಸಾಬ್, ಕೃಷ್ಣ ಸೇರಿದಂತೆ ಹಲವು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಕೇಂದ್ರ ಸರ್ಕಾರದ 32 ಗುಂಟೆ ಭೂಮಿ ಒತ್ತುವರಿ ಆರೋಪ : Chairman Club ವಿರುದ್ಧ ‘ಲೋಕಾ’ಗೆ N.R ರಮೇಶ್ ದೂರು!



















