ಬೆಂಗಳೂರು : ಸಂಚಾರ ದಟ್ಟಣೆಯ ನಡುವೆ ತುರ್ತು ವೈದ್ಯಕೀಯ ಸೇವೆಯನ್ನು ಇನ್ನಷ್ಟು ವೇಗವಾಗಿ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತೆ ಬೈಕ್ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲು ಮುಂದಾಗಿದೆ. ನಿರ್ವಹಣೆ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಬೈಕ್ ಆಂಬುಲೆನ್ಸ್‌ಗಳನ್ನು ಪುನಃ ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

2015ರಲ್ಲೇ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ 30 ಬೈಕ್ ಆಂಬ್ಯುಲೆನ್ಸ್‌ಗಳನ್ನು ಪರಿಚಯಿಸಲಾಗಿತ್ತು. ತುರ್ತು ಚಿಕಿತ್ಸೆಯನ್ನು ರೋಗಿಗಳಿಗೆ ತಲುಪಿಸುವಲ್ಲಿ ಈ ಸೇವೆ ಉತ್ತಮ ಫಲಿತಾಂಶ ನೀಡಿದ್ದರಿಂದ ನಂತರ ತಮಿಳುನಾಡು ಮತ್ತು ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳೂ ಈ ಮಾದರಿಯನ್ನು ಅಳವಡಿಸಿಕೊಂಡಿದ್ದವು. ರಾಜ್ಯದ ವಿವಿಧ ಭಾಗಗಳಲ್ಲಿ ಸಾವಿರಾರು ರೋಗಿಗಳಿಗೆ ಈ ಸೇವೆ ನೆರವಾಗಿತ್ತು. ಆದರೆ, ನಿರ್ವಹಣೆ ಕೊರತೆ ಹಾಗೂ ಇತರ ಆಡಳಿತಾತ್ಮಕ ಕಾರಣಗಳಿಂದ ಒಂದೊಂದಾಗಿ ಬೈಕ್ ಆಂಬ್ಯುಲೆನ್ಸ್‌ಗಳ ಸೇವೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಈ ಸೇವೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಆಸಕ್ತಿ ತೋರಿದೆ.
ಈ ಬಾರಿ ಸುಮಾರು 100 ಬೈಕ್ ಆಂಬ್ಯುಲೆನ್ಸ್‌ಗಳನ್ನು ರಸ್ತೆಗಿಳಿಸುವ ಕುರಿತು ಆರೋಗ್ಯ ಇಲಾಖೆ ಯೋಜನೆ ರೂಪಿಸುತ್ತಿದೆ. ಸಣ್ಣಪುಟ್ಟ ಗಾಯಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು, 108 ಆಂಬ್ಯುಲೆನ್ಸ್ ಬರುವವರೆಗೆ ಜೀವ ರಕ್ಷಕ ತುರ್ತು ಚಿಕಿತ್ಸೆ ಒದಗಿಸುವುದು ಹಾಗೂ ರಸ್ತೆ ಅಪಘಾತಗಳಲ್ಲಿ ‘ಗೋಲ್ಡನ್ ಅವರ್’ ಚಿಕಿತ್ಸೆ ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ವಿಶೇಷವಾಗಿ ಬೆಂಗಳೂರು ಸೇರಿದಂತೆ ಸಂಚಾರ ದಟ್ಟಣೆ ಹೆಚ್ಚಿರುವ ನಗರಗಳಲ್ಲಿ 108 ಆಂಬುಲೆನ್ಸ್ ನಿಗದಿತ ಸ್ಥಳಕ್ಕೆ ತಲುಪಲು ವಿಳಂಬವಾಗುವ ಸಂದರ್ಭಗಳಲ್ಲಿ ಬೈಕ್ ಆಂಬ್ಯುಲೆನ್ಸ್‌ಗಳು ಪರಿಣಾಮಕಾರಿ ಪರ್ಯಾಯವಾಗಲಿವೆ. ಆದರೆ, ಹಿಂದಿನ ಬಾರಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ ಕಾರಣ ಸಾರ್ವಜನಿಕರಿಂದ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗದಿರುವುದೂ ಸೇವೆ ಸ್ಥಗಿತಗೊಳ್ಳಲು ಕಾರಣಗಳಲ್ಲಿ ಒಂದಾಗಿತ್ತು.
ಈಗ ಹೊಸ ಮಾದರಿಯಲ್ಲಿ ಬೈಕ್ ಆಂಬ್ಯುಲೆನ್ಸ್ ಸೇವೆ ಜಾರಿಗೆ ಬಂದರೆ, ತುರ್ತು ಚಿಕಿತ್ಸಾ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ : ಐಡಿ ಕಾರ್ಡ್ ಇಲ್ಲ, ವ್ಯಾಪಾರಕ್ಕೆ ಜಾಗವೂ ಇಲ್ಲ : ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ!



















