ಬೆಂಗಳೂರು : ಪಾಕಿಸ್ತಾನ ಕ್ರಿಕೆಟ್ ತಂಡದ ಇತ್ತೀಚಿನ ಪ್ರದರ್ಶನದ ಕುರಿತು ಕೇಳಿಬರುತ್ತಿರುವ ಟೀಕೆಗಳಿಗೆ ತಂಡದ ವೈಟ್-ಬಾಲ್ ಹೆಡ್ ಕೋಚ್ ಮೈಕ್ ಹೆಸ್ಸನ್ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನ ತಂಡದ ಪ್ರದರ್ಶನ ಕುಸಿಯುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಅವರು, ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಹೊರತುಪಡಿಸಿ ಉಳಿದೆಲ್ಲಾ ತಂಡಗಳ ಎದುರು ಪಾಕ್ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಭಾರತ ವಿಶ್ವದ ಅತ್ಯುತ್ತಮ ತಂಡ ಎಂಬುದನ್ನು ಅವರು ಮುಕ್ತ ಕಂಠದಿಂದ ಒಪ್ಪಿಕೊಂಡಿದ್ದಾರೆ.
ಭಾರತದ ವಿರುದ್ಧ ಮಾತ್ರ ಪಾಕ್ ವೈಫಲ್ಯ
ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಮೈಕ್ ಹೆಸ್ಸನ್, ಭಾರತದ ವಿರುದ್ಧದ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಪಾಕಿಸ್ತಾನ ತಂಡದ ಪ್ರಗತಿಯನ್ನು ಅಳೆಯಬಾರದು ಎಂದಿದ್ದಾರೆ. “ಕಳೆದ ವರ್ಷದ ಏಷ್ಯಾ ಕಪ್‌ನಲ್ಲಿ ನಾವು ಭಾರತದ ವಿರುದ್ಧ ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದಿದ್ದೇವೆ. ವಾಸ್ತವವೇನೆಂದರೆ, ಪ್ರಸ್ತುತ ವಿಶ್ವದ ಪ್ರತಿಯೊಂದು ತಂಡವೂ ಭಾರತವನ್ನು ಮಣಿಸಲು ಹೆಣಗಾಡುತ್ತಿದೆ. ಇದು ಕೇವಲ ಪಾಕಿಸ್ತಾನಕ್ಕೆ ಮಾತ್ರ ಸೀಮಿತವಲ್ಲ. ಸರಿ ಅಥವಾ ತಪ್ಪು ಏನೇ ಇರಲಿ, ಪಾಕಿಸ್ತಾನದ ಪ್ರದರ್ಶನವನ್ನು ಅವರು ಭಾರತದ ವಿರುದ್ಧ ಹೇಗೆ ಆಡುತ್ತಾರೆ ಎಂಬುದರ ಮೇಲೆ ಅಳೆಯಲಾಗುತ್ತದೆ. ಆದರೆ ಸದ್ಯಕ್ಕೆ ಭಾರತ ಅತ್ಯುತ್ತಮ ತಂಡ ಮಾತ್ರವಲ್ಲ, ಅವರು ಎಲ್ಲರಿಗಿಂತ ಬಹುದೂರ ಮುಂದಿದ್ದಾರೆ,” ಎಂದು ಹೆಸ್ಸನ್ ಹೇಳಿದ್ದಾರೆ.
ಸ್ಥಿರ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ
ತಮ್ಮ ಅವಧಿಯಲ್ಲಿ ಪಾಕಿಸ್ತಾನ ತಂಡ ನಿರಂತರವಾಗಿ ಗೆಲುವು ಸಾಧಿಸುತ್ತಿದೆ ಎಂದು ಹೆಸ್ಸನ್ ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಯಶಸ್ಸು ಸಾಧಿಸುವ ಮುನ್ನ ತಂಡದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಮುಖ್ಯ. ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ನಾವು ಹ್ಯಾರಿ ಬ್ರೂಕ್ ಅವರ ಶತಕದಿಂದಾಗಿ ಇಂಗ್ಲೆಂಡ್ ಎದುರು ಸೋತೆವು. ಅದನ್ನು ಬಿಟ್ಟರೆ ಭಾರತದ ವಿರುದ್ಧ ಮಾತ್ರ ಸೋತಿದ್ದೇವೆ. 2023-2025ರ ಅವಧಿಯಲ್ಲಿ ನಾವು ಐಸಿಸಿ ಟೂರ್ನಿಗಳಲ್ಲಿ ಗುಂಪು ಹಂತದಿಂದಲೇ ಹೊರಬಿದ್ದಿದ್ದೆವು. ಆದರೆ ಈಗ ನಾವು ಆಡುವ ಪಂದ್ಯಗಳಲ್ಲಿ ಶೇಕಡಾ 20ರಷ್ಟು ಗೆಲುವಿನಿಂದ ಶೇಕಡಾ 75ರಷ್ಟು ಗೆಲುವಿನ ಹಾದಿಗೆ ಮರಳಿರುವುದು ದೊಡ್ಡ ಸಾಧನೆ ಎಂದು ಅವರು ವಿವರಿಸಿದ್ದಾರೆ. ಹೆಸ್ಸನ್ ಅಧಿಕಾರ ವಹಿಸಿಕೊಂಡ ನಂತರ ಪಾಕಿಸ್ತಾನವು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಎರಡು ಟಿ20 ತ್ರಿಕೋನ ಸರಣಿಗಳನ್ನು ಗೆದ್ದಿದೆ ಹಾಗೂ ಆರು ದ್ವಿಪಕ್ಷೀಯ ಸರಣಿಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಸೋತಿದೆ.
ಪಾಕಿಸ್ತಾನಕ್ಕೆ ಭಾರತವೇ ಅತಿದೊಡ್ಡ ಸವಾಲು
ವಿಶ್ವಕಪ್ ಹಾಗೂ ಏಷ್ಯಾ ಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಗೆಲ್ಲುವುದು ಇನ್ನೂ ಕಠಿಣ ಸವಾಲಾಗಿಯೇ ಉಳಿದಿದೆ. 2025ರ ಯುಎಇಯಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಮೂರರಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಗುಂಪು ಹಂತ, ಸೂಪರ್ ಫೋರ್ ಹಾಗೂ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತ, ತನ್ನ ಒಂಬತ್ತನೇ ಏಷ್ಯಾ ಕಪ್ ಮುಡಿಗೇರಿಸಿಕೊಂಡಿತ್ತು. ಫೈನಲ್ ಪಂದ್ಯದಲ್ಲಿ 1 ವಿಕೆಟ್‌ಗೆ 113 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ, ದಿಢೀರ್ ಕುಸಿತ ಕಂಡು 146 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನು ಭಾರತ ಕೇವಲ 19.4 ಓವರ್‌ಗಳಲ್ಲಿ ಬೆನ್ನತ್ತಿ ಭರ್ಜರಿ ಜಯ ಸಾಧಿಸಿತ್ತು. ರಾತ್ರೋರಾತ್ರಿ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ, ನಿರಂತರ ಪ್ರಗತಿ ಮತ್ತು ಸ್ಥಿರ ಪ್ರದರ್ಶನದಿಂದ ಮಾತ್ರ ದೀರ್ಘಾವಧಿಯ ಯಶಸ್ಸು ಸಾಧ್ಯ ಎಂದು ಹೆಸ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಶುಭಮನ್ ಗಿಲ್ ಸಾರಥ್ಯದ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ : ಟೆಸ್ಟ್ ಸರಣಿಯ ವೇಳಾಪಟ್ಟಿ ಪ್ರಕಟ


















