ವಾಷಿಂಗ್ಟನ್ : ವಾಟ್ಸ್ಆ್ಯಪ್ ಬಳಕೆದಾರರ ಸಂವಹನ ಅನುಭವವು ಶೀಘ್ರದಲ್ಲೇ ಇನ್‌ಸ್ಟಾಗ್ರಾಮ್‌ನಂತಾಗಲಿದೆ. ಆದರೆ ಇದು ಅತ್ಯುನ್ನತ ಗೌಪ್ಯತೆಯೊಂದಿಗೆ ಲಭ್ಯವಾಗಲಿದೆ. ಮೆಟಾ ಒಡೆತನದ ವಾಟ್ಸ್ಆ್ಯಪ್ ಇದೀಗ ‘ಯೂಸರ್‌ನೇಮ್’ (Username) ಎಂಬ ಹೊಸ ಫೀಚರ್ ಪರಿಚಯಿಸಲು ಸಜ್ಜಾಗಿದೆ.
ಈ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಇತರರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಭಾರತೀಯ ಫಿನ್‌ಟೆಕ್ ಸಂಸ್ಥೆ ‘ಕ್ರೆಡ್’ (CRED) ಸಂಸ್ಥಾಪಕ ಕುನಾಲ್ ಶಾ ಅವರು ಮೆಟಾದ ವಾಟ್ಸ್ಆ್ಯಪ್ ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ಈ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಮೆಟಾ ಸಂಸ್ಥೆಯು ಕ್ರೆಡ್‌ನಲ್ಲಿ 800 ದಶಲಕ್ಷ ಡಾಲರ್ ಹೂಡಿಕೆ ಮಾಡಿದ್ದು, ವಾಟ್ಸ್ಆ್ಯಪ್ ಅನ್ನು ‘ಸೂಪರ್‌ಆ್ಯಪ್’ (Superapp) ಆಗಿ ಪರಿವರ್ತಿಸಿ ಡಿಜಿಟಲ್ ಪಾವತಿ ವಲಯದಲ್ಲಿ ಬಹುದೊಡ್ಡ ಪಾಲು ಪಡೆಯುವ ಗುರಿಯನ್ನು ಕುನಾಲ್ ಶಾ ಹೊಂದಿದ್ದಾರೆ.
ಮೊಬೈಲ್ ಸಂಖ್ಯೆಯ ಸಂಪೂರ್ಣ ಗೌಪ್ಯತೆ
ಈ ಹೊಸ ಅಪ್‌ಡೇಟ್‌ನಿಂದಾಗಿ ನಿಮ್ಮ ಮೊಬೈಲ್ ಸಂಖ್ಯೆಯು ತಾನಾಗಿಯೇ ಇತರರಿಗೆ ಕಾಣಸಿಗುವುದಿಲ್ಲ. ಪ್ರಮುಖವಾಗಿ, ನಿಮ್ಮನ್ನು ಯಾವುದಾದರೂ ದೊಡ್ಡ ಗ್ರೂಪ್‌ಗಳಿಗೆ ಸೇರಿಸಿದಾಗ ಅಥವಾ ನೀವು ಮೊದಲ ಬಾರಿಗೆ ಅಪರಿಚಿತ ವ್ಯಕ್ತಿಗೆ ಮೆಸೇಜ್ ಮಾಡಿದಾಗ ನಿಮ್ಮ ಫೋನ್ ನಂಬರ್ ಸಂಪೂರ್ಣವಾಗಿ ಗೌಪ್ಯವಾಗಿರುತ್ತದೆ. ನೀವಾಗಿ ಇಚ್ಛಿಸಿ ಹಂಚಿಕೊಂಡರೆ ಮಾತ್ರ ಇತರರಿಗೆ ನಿಮ್ಮ ಸಂಖ್ಯೆ ಲಭ್ಯವಾಗಲಿದೆ. ಪ್ರಸ್ತುತ ಕೇವಲ ಫೋನ್ ನಂಬರ್ ಆಧಾರಿತವಾಗಿ ನಡೆಯುತ್ತಿರುವ ವಾಟ್ಸ್ಆ್ಯಪ್ ಸಂವಹನ ವ್ಯವಸ್ಥೆಯಲ್ಲಿ ಇದೊಂದು ಬಹುದೊಡ್ಡ ಹಾಗೂ ಕ್ರಾಂತಿಕಾರಿ ಬದಲಾವಣೆಯಾಗಿದೆ.
ಯೂಸರ್‌ನೇಮ್ ಕಾರ್ಯನಿರ್ವಹಣೆ ಹೇಗೆ?
ಬಳಕೆದಾರರು ಮೂರರಿಂದ ಮೂವತ್ತೈದು ಅಕ್ಷರಗಳ ನಡುವಿನ ವಿಶಿಷ್ಟ ಯೂಸರ್‌ನೇಮ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದೊಂದು ಸಾಮಾಜಿಕ ಜಾಲತಾಣದ ಐಡೆಂಟಿಟಿ ಎನ್ನುವುದಕ್ಕಿಂತ ಹೆಚ್ಚಾಗಿ, ಬಳಕೆದಾರರ ಗೌಪ್ಯತೆಯನ್ನು ಕಾಪಾಡುವ ಫೀಚರ್ ಆಗಿ ವಿನ್ಯಾಸಗೊಂಡಿದೆ. ವಾಟ್ಸಾಪ್‌ನಲ್ಲಿ ಯೂಸರ್‌ನೇಮ್‌ಗಳನ್ನು ಹುಡುಕುವ ಯಾವುದೇ ಡೈರೆಕ್ಟರಿ ಇರುವುದಿಲ್ಲ. ಬದಲಾಗಿ, ಯಾರನ್ನಾದರೂ ಮೊದಲ ಬಾರಿಗೆ ಸಂಪರ್ಕಿಸಲು ಅವರ ನಿಖರವಾದ ಯೂಸರ್‌ನೇಮ್ ತಿಳಿದಿರಬೇಕಾಗುತ್ತದೆ. ಜೊತೆಗೆ ‘ಯೂಸರ್‌ನೇಮ್ ಕೀ’ (Username key) ಎಂಬ ಹೆಚ್ಚುವರಿ ಭದ್ರತಾ ವ್ಯವಸ್ಥೆಯೂ ಇರಲಿದ್ದು, ಬಳಕೆದಾರರು ಯಾರು ತಮ್ಮನ್ನು ಸಂಪರ್ಕಿಸಬಹುದು ಎಂಬುದನ್ನು ನಿಯಂತ್ರಿಸಬಹುದಾಗಿದೆ.
ಖಾತೆಗಳ ಸುರಕ್ಷತೆ
ವಾಟ್ಸ್ಆ್ಯಪ್‌ನ ನೂತನ ಆವೃತ್ತಿಯಲ್ಲಿ ಸೆಟ್ಟಿಂಗ್ಸ್, ನಂತರ ಅಕೌಂಟ್ ಮತ್ತು ಯೂಸರ್‌ನೇಮ್ ಆಯ್ಕೆಗೆ ತೆರಳಿ ಕೇವಲ ಕೆಲವೇ ಸೆಕೆಂಡುಗಳಲ್ಲಿ ತಮಗೆ ಬೇಕಾದ ಹೆಸರನ್ನು ಕಾಯ್ದಿರಿಸಬಹುದು. ವಾಣಿಜ್ಯ ಸಂಸ್ಥೆಗಳು, ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಸಂಘ-ಸಂಸ್ಥೆಗಳು ತಮ್ಮ ಬ್ರ್ಯಾಂಡ್ ಮೌಲ್ಯ ಕಾಪಾಡಿಕೊಳ್ಳಲು ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಲ್ಲಿ ಬಳಸುತ್ತಿರುವ ಯೂಸರ್‌ನೇಮ್ ಅನ್ನು ವಾಟ್ಸ್ಆ್ಯಪ್‌ನಲ್ಲಿಯೂ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಕಲಿ ಖಾತೆಗಳನ್ನು ತಡೆಯುವ ನಿಟ್ಟಿನಲ್ಲಿ ಗಣ್ಯರು, ಸೆಲೆಬ್ರಿಟಿಗಳು ಹಾಗೂ ಸರ್ಕಾರಿ ಸಂಸ್ಥೆಗಳ ಹೆಸರನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯ
ಜಾಗತಿಕವಾಗಿ 3 ಶಕಕೋಟಿಗೂ ಅಧಿಕ ಬಳಕೆದಾರರಿರುವುದರಿಂದ ಒಂದೇ ಹೆಸರನ್ನು ಹಲವರು ಬಯಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ವಾರದಿಂದಲೇ ಯೂಸರ್‌ನೇಮ್ ಕಾಯ್ದಿರಿಸುವ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಹಂತ ಹಂತವಾಗಿ ಈ ಫೀಚರ್ ಸಂಪೂರ್ಣವಾಗಿ ಜಾರಿಗೆ ಬರಲಿದ್ದು, ಆಯಾ ದೇಶಗಳಲ್ಲಿ ಲಭ್ಯವಾದ ತಕ್ಷಣ ಆ್ಯಪ್‌ನಲ್ಲಿಯೇ ಬಳಕೆದಾರರಿಗೆ ನೋಟಿಫಿಕೇಶನ್ ಬರಲಿದೆ. ವಾಟ್ಸ್ಆ್ಯಪ್ ನೂತನ ಮುಖ್ಯಸ್ಥ ಕುನಾಲ್ ಶಾ ಅವರು ಈ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಗತ್ತಿಗೆ ಈ ಫೀಚರ್ ಪರಿಚಯಿಸುವ ಮುನ್ನವೇ ಆದಷ್ಟು ಬೇಗನೆ ನಿಮ್ಮ ನೆಚ್ಚಿನ ಯೂಸರ್‌ನೇಮ್ ಅನ್ನು ಕಾಯ್ದಿರಿಸಿಕೊಳ್ಳುವಂತೆ ಬಳಕೆದಾರರಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ : ಆರೋಗ್ಯ ಸೇತು 2.0ಗೆ ಕೇಂದ್ರ ಸರ್ಕಾರ ಚಾಲನೆ : ಸಾರ್ವಜನಿಕರಿಗೆ ಏನಿವೆ ಉಪಯೋಗಗಳು?



















