ಲಕ್ನೋ : ಪ್ರೀತಿಸಿದ ಯುವತಿಗೋಸ್ಕರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಭಾರೀ ವಿವಾದಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ಶಾಮ್ಲಿ ಮೂಲದ ಆಯುಷ್ ಮಲಿಕ್ ಎಂಬ ಯುವಕ ಈಗ ಮನಸು ಬದಲಿಸಿ ಘರ್ ವಾಪ್ಸಿಯಾಗಿದ್ದಾನೆ. ತನ್ನ ಪೋಷಕರ ಕಣ್ಣೀರು ಹಾಗೂ ಕುಟುಂಬದ ಮೇಲಿನ ಕಾಳಜಿಯಿಂದಾಗಿ ಆಯುಷ್ ಮರಳಿ ಹಿಂದೂ ಧರ್ಮಕ್ಕೆ (ಸನಾತನ ಧರ್ಮಕ್ಕೆ) ಸ್ವಇಚ್ಛೆಯಿಂದ ಮರಳಿದ್ದಾನೆ.
ಮರಳಿ ಹಿಂದೂ ಧರ್ಮಕ್ಕೆ ಬಂದ ನಂತರ ಆಯುಷ್ ಪೂಜೆ-ಪುನಸ್ಕಾರಗಳನ್ನು ಮಾಡುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. “ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೆ. ಆದರೆ, ನನ್ನ ಕುಟುಂಬದವರ ನೋವು ಹಾಗೂ ಒಳಿತನ್ನು ದೃಷ್ಟಿಯಲ್ಲಿಟ್ಟುಕೊಂಡು ಇದೀಗ ಸ್ವಇಚ್ಛೆಯಿಂದ ಸನಾತನ ಧರ್ಮಕ್ಕೆ ಮರಳಿದ್ದೇನೆ. ಇನ್ನುಮುಂದೆ ನನ್ನ ಕುಟುಂಬದವರ ಆಶ್ರಯದಲ್ಲಿಯೇ ಜೀವಿಸಲು ಬಯಸುತ್ತೇನೆ” ಎಂದು ಆತ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾನೆ. ಆಯುಷ್ ವಿಧಿಬದ್ಧವಾಗಿ ಸನಾತನ ಧರ್ಮಕ್ಕೆ ಮರಳಿದ್ದಾನೆ ಎಂದು ಆತನ ತಂದೆ ದೇವರಾಜ್ ಮಲಿಕ್ ಕೂಡ ಖಚಿತಪಡಿಸಿದ್ದಾರೆ.
ಕೋಟ್ಯಂತರ ರೂಪಾಯಿ ಆಸ್ತಿ ಕಬಳಿಸುವ ಸಂಚು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಫಿಸಿಯೋಥೆರಪಿಸ್ಟ್ ಆಗಿರುವ ಚಾಂದಿನಿ ಖುರೇಷಿ ಹಾಗೂ ಆಕೆಯ ತಂದೆ ಇಸ್ಲಾಂ ಖುರೇಷಿಯನ್ನು ಕೆಲವು ವಾರಗಳ ಹಿಂದಷ್ಟೇ ಬಂಧಿಸಿದ್ದರು. ದೇವರಾಜ್ ಮಲಿಕ್ ಅವರು ನೀಡಿದ್ದ ದೂರಿನ ಆಧಾರದ ಮೇಲೆ, ‘ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ’ಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತಮ್ಮ ಕುಟುಂಬಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದಲೇ ಚಾಂದಿನಿ ಮತ್ತು ಆಕೆಯ ತಂದೆ ಒಂದು ವ್ಯವಸ್ಥಿತ ಸಂಚು ರೂಪಿಸಿದ್ದರು. ಅದರ ಭಾಗವಾಗಿಯೇ ನನ್ನ ಮಗನ ಬ್ರೈನ್‌ವಾಶ್ ಮಾಡಿ, ಆತನಿಗೆ ‘ಮೊಹಮ್ಮದ್ ಅಲಿ’ ಎಂದು ಹೆಸರಿಟ್ಟು ಇಸ್ಲಾಂಗೆ ಮತಾಂತರ ಮಾಡಿದ್ದರು ಎಂದು ದೇವರಾಜ್ ಆರೋಪಿಸಿದ್ದರು.
ಆಸ್ಪತ್ರೆಯಲ್ಲಿ ಶುರುವಾಗಿದ್ದ ಪ್ರೇಮ್ ಕಹಾನಿ
ಬಿ-ಫಾರ್ಮಾ (B-Pharma) ಪದವೀಧರನಾಗಿರುವ ಆಯುಷ್, ತನ್ನ ಕುಟುಂಬದ ಮೆಡಿಕಲ್ ಸ್ಟೋರ್ ನಿರ್ವಹಣೆ ಮಾಡುತ್ತಿದ್ದ. ಎಫ್‌ಐಆರ್ ಪ್ರಕಾರ, 2018ರಲ್ಲಿ ಕಾಲಿಗೆ ಪೆಟ್ಟಾಗಿ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದಾಗ ಅಲ್ಲಿ ಚಾಂದಿನಿಯ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಪೊಲೀಸರ ಮಾಹಿತಿ ಪ್ರಕಾರ, ಚಾಂದಿನಿ ಮತ್ತು ಆಕೆಯ ಕುಟುಂಬದವರು ನಿಧಾನವಾಗಿ ಆಯುಷ್‌ನನ್ನು ಇಸ್ಲಾಂ ಧರ್ಮದತ್ತ ಆಕರ್ಷಿತನಾಗುವಂತೆ ಪ್ರಭಾವ ಬೀರಿದ್ದರು.
2023ರಲ್ಲಿ ಆತನನ್ನು ದೆಹಲಿಗೆ ಕರೆದೊಯ್ದು ಮತಾಂತರ ಮಾಡಿಸಿ, ನಿಕಾಹ್ (ಮದುವೆ) ಕೂಡ ಮಾಡಿಸಲಾಗಿತ್ತು ಎಂಬ ಆರೋಪವಿದೆ. ಆದರೆ, ತನಿಖೆ ವೇಳೆ ಯಾವುದೇ ವಿವಾಹ ಪ್ರಮಾಣಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇಸ್ಲಾಂಗೆ ಮತಾಂತರಗೊಂಡಿದ್ದ ಆಯುಷ್, ಗಡ್ಡ ಬಿಡುವುದು, ದಿನಕ್ಕೆ ಐದು ಬಾರಿ ನಮಾಜ್ ಮಾಡುವುದು ಹಾಗೂ ಉಡುಗೆ-ತೊಡುಗೆ ಬದಲಾಯಿಸುವ ಮೂಲಕ ಸಂಪೂರ್ಣವಾಗಿ ಇಸ್ಲಾಮಿಕ್ ಆಚರಣೆಗಳನ್ನು ರೂಢಿಸಿಕೊಂಡಿದ್ದ ಎನ್ನಲಾಗಿದೆ. ಇದೀಗ ಆತ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದು, ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
ಇದನ್ನೂ ಓದಿ : ರಾಮಮಂದಿರ ದೇಣಿಗೆ ಕಳವು : ‘ದೇವಾಲಯ ನಡೆಸುವುದು ನಮ್ಮ ಕೆಲಸವಲ್ಲ’ ಎಂದು ಅಂತರ ಕಾಯ್ದುಕೊಂಡ VHP!


















