ಇನ್ಮುಂದೆ ಮನುಷ್ಯನಿಗೆ ಯಾವುದೇ ಬೆಲೆಯಿಲ್ಲ, ಎಲ್ಲ ಕ್ಷೇತ್ರಗಳನ್ನೂ ಕೃತಕ ಬುದ್ಧಿಮತ್ತೆ(ಎಐ) ಆವರಿಸಿಕೊಳ್ಳಲಿದೆ ಎಂಬ ವಾದಕ್ಕೆ ವ್ಯತಿರಿಕ್ತವಾದ ಸುದ್ದಿಯೊಂದು ಹೊರಬಿದ್ದಿದೆ. ವಾಹನ ಉತ್ಪಾದನಾ ವಲಯದ ದೈತ್ಯ ಸಂಸ್ಥೆಯಾದ ಫೋರ್ಡ್, ತನ್ನ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ತಾಂತ್ರಿಕ ದೋಷಗಳನ್ನು ನಿವಾರಿಸಲು ಕೃತಕ ಬುದ್ಧಿಮತ್ತೆ (AI) ಹಾಗೂ ಸ್ವಯಂಚಾಲಿತ ವ್ಯವಸ್ಥೆಯನ್ನು ಅತಿಯಾಗಿ ನಂಬಿ ಇದೀಗ ಕೈಸುಟ್ಟುಕೊಂಡಿದೆ.
ದಶಕಗಳ ಅನುಭವವಿರುವ ಮಾನವ ಸಂಪನ್ಮೂಲದ ಜ್ಞಾನವಿಲ್ಲದೆ, ಕೇವಲ ತಂತ್ರಜ್ಞಾನದಿಂದ ಮಾತ್ರ ಗುಣಮಟ್ಟದ ವಾಹನಗಳನ್ನು ತಯಾರಿಸಲು ಸಾಧ್ಯವಿಲ್ಲ ಎಂಬುದು ಕೊನೆಗೂ ಕಂಪನಿಗೆ ಅರಿವಾಗಿದೆ. ಹೀಗಾಗಿ ಫೋರ್ಡ್ ಕಂಪನಿಯು ಈಗ ತನ್ನ ಹಳೆಯ ಅನುಭವಿ ಎಂಜಿನಿಯರ್‌ಗಳನ್ನು ಮರಳಿ ಕೆಲಸಕ್ಕೆ ಕರೆಸಿಕೊಳ್ಳುತ್ತಿದೆ. ಈ ತಂತ್ರವು ಈಗಾಗಲೇ ಕಂಪನಿಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಾರಂಭಿಸಿದೆ.
ಅತಿಯಾದ ತಂತ್ರಜ್ಞಾನದ ನಂಬಿಕೆ ತಂದ ಆಪತ್ತು
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಫೋರ್ಡ್ ಸಂಸ್ಥೆಯು ಕಳೆದ ಮೂರು ವರ್ಷಗಳಲ್ಲಿ ಸುಮಾರು 350ಕ್ಕೂ ಹೆಚ್ಚು ನಿವೃತ್ತ ಹಾಗೂ ಹಿರಿಯ ಎಂಜಿನಿಯರ್‌ಗಳನ್ನು ಮತ್ತು ಪೂರೈಕೆದಾರ ಸಂಸ್ಥೆಗಳ ತಜ್ಞರನ್ನು ಮರುನೇಮಕ ಮಾಡಿಕೊಂಡಿದೆ. ಸಂಸ್ಥೆಯ ವಾಹನ ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಚಾರ್ಲ್ಸ್ ಪೂನ್ ಅವರು ಮಾತನಾಡಿ, “ಕೇವಲ ಎಐ ತಂತ್ರಜ್ಞಾನಕ್ಕೆ ವಿನ್ಯಾಸದ ಅಗತ್ಯತೆಗಳನ್ನು ಒದಗಿಸಿದರೆ ಅದು ಅತ್ಯುತ್ತಮ ಉತ್ಪನ್ನವನ್ನು ನೀಡುತ್ತದೆ ಎಂದು ನಾವು ತಪ್ಪಾಗಿ ಭಾವಿಸಿದ್ದೆವು.
ಎಐ ಒಂದು ಅದ್ಭುತ ಸಾಧನ ಹೌದಾದರೂ, ಅದಕ್ಕೆ ತರಬೇತಿ ನೀಡಲು ನಾವು ಬಳಸುವ ಮಾಹಿತಿಯಷ್ಟೇ ಅದು ಉತ್ತಮವಾಗಿರುತ್ತದೆ” ಎಂದು ಒಪ್ಪಿಕೊಂಡಿದ್ದಾರೆ. ಹಿರಿಯ ಎಂಜಿನಿಯರ್‌ಗಳು ಕಂಪನಿ ತೊರೆಯುವ ಮುನ್ನ ಅವರ ಜ್ಞಾನವನ್ನು ಸಂರಕ್ಷಿಸಿಡಲು ಫೋರ್ಡ್ ವಿಫಲವಾಗಿದ್ದರಿಂದ, ಎಐ ವ್ಯವಸ್ಥೆಗೆ ವಾಸ್ತವ ಪ್ರಪಂಚದ ಸೂಕ್ಷ್ಮ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
‘ಗ್ರೇ ಬೇರ್ಡ್’ ಎಂಜಿನಿಯರ್‌ಗಳ ರಂಗಪ್ರವೇಶ
ಈ ತಾಂತ್ರಿಕ ಹೊರೆಯನ್ನು ನೀಗಿಸಲು ಫೋರ್ಡ್ ಸಂಸ್ಥೆಯು ಮರಳಿ ಕರೆತಂದಿರುವ ಈ ಹಿರಿಯ ತಜ್ಞರನ್ನು ಆಂತರಿಕವಾಗಿ ‘ಗ್ರೇ ಬೇರ್ಡ್’ (ಅನುಭವಿ ಹಿರಿಯರು) ಎಂದು ಕರೆಯಲಾಗುತ್ತಿದೆ. ಈ ಹಿರಿಯ ಎಂಜಿನಿಯರ್‌ಗಳು ಈಗ ಸಂಸ್ಥೆಯ ಯುವ ಉದ್ಯೋಗಿಗಳಿಗೆ ಮಾರ್ಗದರ್ಶನ ನೀಡುತ್ತಿರುವುದಲ್ಲದೆ, ಎಐ ಪರಿಕರಗಳನ್ನು ಮರುತರಬೇತಿಗೊಳಿಸಲು ನೆರವಾಗುತ್ತಿದ್ದಾರೆ. ವಾಹನಗಳು ಕಾರ್ಖಾನೆಯಿಂದ ಹೊರಹೋಗುವ ಮುನ್ನವೇ ಅವುಗಳ ಗುಣಮಟ್ಟದಲ್ಲಿರುವ ದೋಷಗಳನ್ನು ಗುರುತಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಮಸ್ಯೆಗಳು ಉದ್ಭವಿಸಿದ ನಂತರ ಅವುಗಳನ್ನು ಸರಿಪಡಿಸುವ ಬದಲು, ಸಮಸ್ಯೆಗಳೇ ಬರದಂತೆ ತಡೆಯುವ ನಿಟ್ಟಿನಲ್ಲಿ ಈ ಹಿರಿಯರ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕುಮಾರ್ ಗಲ್ಹೋತ್ರಾ ತಿಳಿಸಿದ್ದಾರೆ.
ಎಐ ತಂತ್ರಜ್ಞಾನದ ಕೈಬಿಡದ ಫೋರ್ಡ್
ಹಿರಿಯ ಎಂಜಿನಿಯರ್‌ಗಳನ್ನು ಮರಳಿ ಕರೆತಂದ ತಕ್ಷಣ ಫೋರ್ಡ್ ಸಂಸ್ಥೆಯು ಕೃತಕ ಬುದ್ಧಿಮತ್ತೆಯನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಬದಲಿಗೆ, ಅನುಭವಿಗಳ ಜ್ಞಾನದ ಸಹಾಯದಿಂದ ಎಐ ತಂತ್ರಜ್ಞಾನವನ್ನು ಮತ್ತಷ್ಟು ಚುರುಕುಗೊಳಿಸುವ ಕೆಲಸವನ್ನು ಮಾಡುತ್ತಿದೆ ಎನ್ನಲಾಗಿದೆ. ವಾಹನಗಳ ಸಾಫ್ಟ್‌ವೇರ್ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಕಂಪನಿಯು ಈಗಾಗಲೇ 40 ಸದಸ್ಯರ ಪ್ರತ್ಯೇಕ ಸಾಫ್ಟ್‌ವೇರ್ ಗುಣಮಟ್ಟ ಖಾತರಿ ತಂಡವನ್ನು ರಚಿಸಿದೆ. ಹಿರಿಯ ಎಂಜಿನಿಯರ್‌ಗಳ ಮರುನೇಮಕ ಮತ್ತು ತಾಂತ್ರಿಕ ಬದಲಾವಣೆಗಳ ಜುಗಲ್‌ಬಂದಿಯಿಂದಾಗಿ ಫೋರ್ಡ್ ಸಂಸ್ಥೆಯು ಇತ್ತೀಚಿನ ಜೆಡಿ ಪವರ್ ಇನಿಶಿಯಲ್ ಕ್ವಾಲಿಟಿ ಸರ್ವೇಯಲ್ಲಿ (JD Power Initial Quality Survey) ಮುಂಚೂಣಿ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ : ವೈದ್ಯರ ನಿರ್ಲಕ್ಷ್ಯಕ್ಕೆ ಕಣ್ಣನ್ನೇ ಕಳೆದುಕೊಂಡ 19 ತಿಂಗಳ ಕಂದಮ್ಮ!



















