ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಇದೇ ವಾರದಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚಟುವಟಿಕೆ ಆರಂಭವಾಗಿದೆ. ಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟ ಪುನಾರಚನೆ ಕುರಿತ ಅಂತಿಮ ಪಟ್ಟಿಯನ್ನು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೇ ವಾರ ಮುಖ್ಯಮಂತ್ರಿ ಡಿಕೆಶಿ ಹಾಗೂ ಉಪಮುಖ್ಯಮಂತ್ರಿ ನೇತೃತ್ವದ ತಂಡ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸುವ ಸಾಧ್ಯತೆ ಇದೆ.
ದೆಹಲಿಯಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಸಭೆಯಲ್ಲಿ ಸಚಿವ ಸಂಪುಟ ಪುನಾರಚನೆ, ಹೊಸ ಸೇರ್ಪಡೆಗಳು ಮತ್ತು ಕೆಲ ಸಚಿವರ ಬದಲಾವಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ, ಯಾರಿಗೆ ಸಂಪುಟದಿಂದ ಹೊರಬೀಳಬೇಕಾಗುತ್ತದೆ ಎಂಬ ಕುತೂಹಲ ಆಡಳಿತ ಪಕ್ಷದಲ್ಲೇ ಹೆಚ್ಚಾಗಿದೆ. ಮಾಜಿ ಸಚಿವರು ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್ ನಿರ್ಧಾರಕ್ಕಾಗಿ ತೀವ್ರ ನಿರೀಕ್ಷೆಯಲ್ಲಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.
“ಈ ಅವಕಾಶ ತಪ್ಪಿದರೆ ಮತ್ತೆ ಸಚಿವ ಸ್ಥಾನ ಸಿಗುವುದು ಕಷ್ಟ” ಎಂಬ ಲೆಕ್ಕಾಚಾರದಲ್ಲಿ ಹಲವಾರು ಶಾಸಕರು ಸಚಿವ ಸ್ಥಾನಕ್ಕಾಗಿ ಬಲವಾದ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಇದೇ ಸುತ್ತಿನಲ್ಲಿ ಸಚಿವ ಸ್ಥಾನ ಪಡೆಯಲು ಆಕಾಂಕ್ಷಿಗಳು ಎಲ್ಲ ರೀತಿಯ ರಾಜಕೀಯ ಕಸರತ್ತು ನಡೆಸುತ್ತಿದ್ದು, ಹೈಕಮಾಂಡ್ ಯಾರಿಗೆ ಗುಡ್ ನ್ಯೂಸ್ ನೀಡುತ್ತದೆ, ಯಾರಿಗೆ ನಿರಾಸೆ ಎದುರಾಗುತ್ತದೆ ಎಂಬುದು ಸದ್ಯದ ಬಹುದೊಡ್ಡ ಕುತೂಹಲವಾಗಿದೆ.
ಇದನ್ನೂ ಓದಿ : ‘ಸಿಎಂ ಎಲ್ಲರಿಗೂ ಇರಬೇಕೇ ಹೊರತು ಕಾಂಗ್ರೆಸ್‌ಗೆ ಮಾತ್ರ ಅಲ್ಲ’ – ಡಿಕೆಶಿ ವಿರುದ್ಧ ಆರ್.ಅಶೋಕ್ ವಾಗ್ದಾಳಿ!



















