ಬೆಂಗಳೂರು : ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ಚಪ್ಪಲಿ ಎಸೆದಿರುವುದು ತೀವ್ರ ಖಂಡನೀಯ. ಇದು ರಾಜಕೀಯ ಸಂಸ್ಕೃತಿಯನ್ನು ಹಾಳು ಮಾಡುತ್ತದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಅವಮಾನಿಸಲು, ಹಿಮ್ಮೆಟ್ಟಿಸಲು ಮಾಡಿರಬಹುದಾದ ಈ ಕೃತ್ಯ ಅತ್ಯಂತ ಹೀನಾಯವಾದದ್ದು. ಜೊತೆಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಅತ್ಯಂತ ಖಂಡನೀಯ ಕೃತ್ಯ. ನಮ್ಮ ಯುವ ಶಾಸಕ ಪ್ರದೀಪ್ ಈಶ್ವರ್ ಅವರಿಗೂ, ಯೂಟರ್ನ್ ಕುಮಾರಸ್ವಾಮಿ ಅವರಿಗೂ ಬಹಳ ವ್ಯತ್ಯಾಸವಿದೆ. ನಮ್ಮ ಶಾಸಕರು ಇಂತಹ ಕೃತ್ಯಗಳಿಗೆ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ವ್ಯಕ್ತಪಡಿಸಬೇಕು ಹೊರತು ವೈಯಕ್ತಿಕ ಅವಮಾನ, ಬೆದರಿಕೆ ಅಥವಾ ಅಸಭ್ಯ ವರ್ತನೆಗೆ ಅವಕಾಶ ನೀಡಬಾರದು. ಇಂತಹ ಘಟನೆಗಳು ಸಾರ್ವಜನಿಕ ಜೀವನದ ಘನತೆಗೆ ಧಕ್ಕೆ ತರುತ್ತವೆ ಹಾಗೂ ರಾಜಕೀಯ ಸಂಸ್ಕೃತಿಯನ್ನು ಹಾಳು ಮಾಡುತ್ತವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಂಯಮ, ಸೌಜನ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ : ಸಾವಿರಾರು ಜನರ ಬದುಕು ಬೆಳಗಿಸಿದ ಶಿಕ್ಷಣ ತಪಸ್ವಿ ಡಾ. ಬಿ.ಎಫ್. ದಂಡಿನ್ ನಿಧನ



















