ಬೆಂಗಳೂರು: ಕೇಂದ್ರ ಸರ್ಕಾರವು ಹೊಸ ಆದಾಯ ತೆರಿಗೆ ಕಾಯ್ದೆಯನ್ನು ಜಾರಿಗೊಳಿಸಿದ್ದು, ಕೆಲ ದಿನಗಳ ಹಿಂದಷ್ಟೇ ಬ್ಯಾಂಕ್ ಠೇವಣಿ ಮೂಲಕ ಗಳಿಸುವ ಬಡ್ಡಿ ಆದಾಯಕ್ಕೂ ಟಿಡಿಎಸ್ ಕಡಿತಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಸ್ಪಷ್ಟನೆ ನೀಡಿದೆ. ಬ್ಯಾಂಕಿನಲ್ಲಿ ಇರಿಸುವ ಸ್ಥಿರ ಠೇವಣಿ (FD), ರಿಕರಿಂಗ್ ಡೆಪಾಸಿಟ್ (RD) ಸೇರಿ ಇತರೆ ಠೇವಣಿಗಳ ಮೇಲೆ ಗಳಿಸುವ ಬಡ್ಡಿ ಆದಾಯಕ್ಕೆ ಆದಾಯ ತೆರಿಗೆ ನಿಯಮಗಳ ಪ್ರಕಾರ ಟಿಡಿಎಸ್ ಅನ್ವಯವಾಗುತ್ತದೆ ಎಂದು ತಿಳಿಸಿದೆ.
ಸಾಮಾನ್ಯ ನಾಗರಿಕರು ಅಂದರೆ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಒಂದು ಹಣಕಾಸು ವರ್ಷದಲ್ಲಿ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬಡ್ಡಿ ಆದಾಯವಾಗಿ ಗಳಿಸಿದರೆ ಶೇ.10ರಷ್ಟು ಟಿಡಿಎಸ್ ಕಡಿತವಾಗುತ್ತದೆ. ಇದೇ ರೀತಿ, ಹಿರಿಯ ನಾಗರಿಕರು ಒಂದು ವರ್ಷದಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಬಡ್ಡಿ ಆದಾಯವಾಗಿ ಗಳಿಸಿದರೆ, ಶೇ.10ರಷ್ಟು ಟಿಡಿಎಸ್ ಕಡಿತವಾಗುತ್ತದೆ. ಬಡ್ಡಿ ಆದಾಯ ನಿಗದಿತ ಮಿತಿಯನ್ನು ಮೀರಿದಾಗ ಬ್ಯಾಂಕುಗಳು ಮೂಲದಲ್ಲೇ ತೆರಿಗೆಯನ್ನು ಕಡಿತಗೊಳಿಸಿ ಸರ್ಕಾರಕ್ಕೆ ಜಮಾ ಮಾಡುತ್ತವೆ.
ಟಿಡಿಎಸ್ ಕಡಿತವಾದರೆ ಹಣ ಮರಳಿ ಸಿಗುತ್ತದೆಯೇ?
ಟಿಡಿಎಸ್ ಕಡಿತವಾಗಿದೆ ಎಂದರೆ ಅದು ಅಂತಿಮ ತೆರಿಗೆ ಅಲ್ಲ. ನಿಮ್ಮ ಒಟ್ಟು ಆದಾಯವು ತೆರಿಗೆ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೆ ಅಥವಾ ತೆರಿಗೆ ಪಾವತಿಸಬೇಕಾಗಿಲ್ಲದಿದ್ದರೆ, ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಮೂಲಕ ರಿಫಂಡ್ ಪಡೆಯಬಹುದು. ಆದಾಗ್ಯೂ, ತೆರಿಗೆ ವ್ಯಾಪ್ತಿಗೆ ಬಾರದ ವ್ಯಕ್ತಿಗಳು ಬ್ಯಾಂಕ್ ಗೆ ಫಾರ್ಮ್ 15G (ಸಾಮಾನ್ಯರು) ಅಥವಾ ಫಾರ್ಮ್ 15H (ಹಿರಿಯ ನಾಗರಿಕರು) ಸಲ್ಲಿಸುವ ಮೂಲಕ ಟಿಡಿಎಸ್ ಕಡಿತವನ್ನು ತಪ್ಪಿಸಬಹುದು.
1961ರ ಆದಾಯ ತೆರಿಗೆ ಕಾಯ್ದೆ ಅನ್ವಯವೂ ಇದೇ ಟಿಡಿಎಸ್ ನಿಯಮಗಳು ಅನ್ವಯವಾಗುತ್ತಿದ್ದವು. ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿಯೂ ಹಳೆಯ ಟಿಡಿಎಸ್ ನಿಯಮಗಳನ್ನೇ ಅಳವಡಿಸಿಕೊಳ್ಳಲಾಗಿದೆ. ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಯಾದ ಕಾರಣ ಯಾವುದಾದರೂ ಬದಲಾವಣೆಗಳಾಗಿವೆ ಎಂಬ ಗೊಂದಲ ಜನರನ್ನು ಕಾಡುತ್ತಿತ್ತು. ಹಾಗಾಗಿ, ಸ್ಪಷ್ಟನೆ ನೀಡಲಾಗಿದೆ.



















