ಮಂಗಳೂರು: ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ನಗರಕ್ಕೆ ಭೇಟಿ ನೀಡಲಿದ್ದು, ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಮೂಡಿಸಿದೆ.

ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಈ ಭವ್ಯ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಶಾರುಖ್ ಖಾನ್ ಅವರನ್ನು ನೇರವಾಗಿ ಕಾಣುವ ಅವಕಾಶ ಸಿಗಲಿರುವುದರಿಂದ ಕರಾವಳಿ ಭಾಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕರಾವಳಿಗೂ ಶಾರುಖ್ ಖಾನ್‌ಗೂ ಬಾಲ್ಯದ ನಂಟು
ಶಾರುಖ್ ಖಾನ್ ಅವರಿಗೆ ಮಂಗಳೂರು ಭಾವನಾತ್ಮಕ ನಂಟು ಹೊಂದಿರುವ ನಗರವಾಗಿದೆ. ಹಲವು ಸಂದರ್ಭಗಳಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿರುವ ಅವರು, “ನಾನು ಮಂಗಳೂರಿನ ಮಗ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಶಾರುಖ್ ಅವರ ಅಜ್ಜ 1960ರ ದಶಕದಲ್ಲಿ ಮಂಗಳೂರು ಬಂದರಿನಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಶಾರುಖ್ ತಮ್ಮ ಬಾಲ್ಯದ ಕೆಲವು ವರ್ಷಗಳನ್ನು ಮಂಗಳೂರಿನಲ್ಲಿ ಕಳೆದಿದ್ದರು. ಅಜ್ಜಿಯ ಆರೈಕೆಯಲ್ಲಿ ಬೆಳೆದ ಆ ದಿನಗಳ ನೆನಪುಗಳನ್ನು ಅವರು ಹಲವು ವೇದಿಕೆಗಳಲ್ಲಿ ಸ್ಮರಿಸಿದ್ದಾರೆ.



















