ಬೆಳಗಾವಿ: ಕಳ್ಳ ದಾರಿಯಲ್ಲಿ ಸಂಚರಿಸುತ್ತಿದ್ದ ಟಿಪ್ಪರ್ ವಾಹನಗಳನ್ನು ತಡೆದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ಟೋಲ್ ತಪ್ಪಿಸಲು ಟಿಪ್ಪರ್ ಚಾಲಕರು ಕಳ್ಳ ದಾರಿಯನ್ನು ಬಳಸುತ್ತಿರುವುದು ಗ್ರಾಮಸ್ಥರ ಆರೋಪವಾಗಿದೆ. ರೈತರು ಓಡಾಟಕ್ಕೆ ನಿರ್ಮಿಸಿದ ರಸ್ತೆಯಲ್ಲೇ ಬೃಹತ್ ಗಾತ್ರದ ಟಿಪ್ಪರ್ ಸೇರಿದಂತೆ ಭಾರೀ ವಾಹನಗಳು ಸಂಚರಿಸುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಸುಮಾರು 40ಕ್ಕೂ ಹೆಚ್ಚು ಟಿಪ್ಪರ್ ವಾಹನಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು. ಚಿಕ್ಕಬಾಗೇವಾಡಿ ಮತ್ತು ಎಂಕೆ ಹುಬ್ಬಳ್ಳಿ ಮಾರ್ಗ ಮಧ್ಯೆ ವಾಹನಗಳನ್ನು ನಿಲ್ಲಿಸಿ ಆಕ್ರೋಶ ಹೊರಹಾಕಿದರು.
ಈ ವೇಳೆ, ಇಲ್ಲಿ ಈಗಾಗಲೇ ಅಪಘಾತಗಳು ಸಂಭವಿಸಿ ಅನೇಕರು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ? ಎಂದು ಅಧಿಕಾರಿಗಳನ್ನು ರೈತರು ಪ್ರಶ್ನಿಸಿದರು. ಕಳ್ಳ ಮಾರ್ಗದಲ್ಲಿ ಭಾರೀ ವಾಹನಗಳು ಸಂಚರಿಸುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ವಾಹನಗಳನ್ನು ತಡೆದರೂ ಸ್ಥಳಕ್ಕೆ ಅಧಿಕಾರಿಗಳು ಆಗಮಿಸದಿರುವುದಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ಬೃಹತ್ ಗಾತ್ರದ ವಾಹನಗಳ ಸಂಚಾರವನ್ನು ನಿಲ್ಲಿಸುವಂತೆ ರೈತರು ಆಗ್ರಹಿಸಿದ್ದಾರೆ.


















