ಮೈಸೂರು : ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಡ್ಯಾಂ ಹಿನ್ನೀರಿನಲ್ಲಿ ತ್ಯಾಜ್ಯ ಸೇರುತ್ತಿರುವುದು ಬೆಳಕಿಗೆ ಬಂದಿದೆ. ರೆಸಾರ್ಟ್ ಹಾಗೂ ಹೋಂಸ್ಟೇಗಳಿಂದ ಹೊರಬರುತ್ತಿರುವ ಮಲಮೂತ್ರ ಮತ್ತು ಇತರ ತ್ಯಾಜ್ಯವನ್ನು ನೇರವಾಗಿ ಕಬಿನಿ ಹಿನ್ನೀರಿಗೆ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕಪಿಲೆ ನದಿಯ ಒಡಲಿಗೆ ಈ ತ್ಯಾಜ್ಯ ಹರಿದು ಸೇರುತ್ತಿದ್ದು, ನೀರು ಕಲುಷಿತಗೊಳ್ಳುವ ಭೀತಿ ಎದುರಾಗಿದೆ. ಸ್ಥಳೀಯರು ಮತ್ತು ಅಧಿಕಾರಿಗಳು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಪರಿಸರ ಸಂರಕ್ಷಣಾ ಇಲಾಖೆಗೆ ಕೂಡ ಕಬಿನಿ ಯೋಜನೆಯ ಇಂಜಿನಿಯರ್ ಪತ್ರ ಬರೆದಿದ್ದಾರೆ.
ಕಲುಷಿತಗೊಳಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಮಾನವನ ಮಲ ಹಾಗೂ ಇತರೆ ತ್ಯಾಜ್ಯವನ್ನು ಬಿಡುತ್ತಿರುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಪಾಲಕ ಎಂಜಿನಿಯರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ : 3 ತಿಂಗಳಾದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ.. ಜನಾಕ್ರೋಶ



















