ಬೆಂಗಳೂರು : ಬೆಂಗಳೂರು ನಗರದ ನಮ್ಮ ಮೆಟ್ರೋ ನಾಗಸಂದ್ರ ನಿಲ್ದಾಣದಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ನಿಲ್ದಾಣದಲ್ಲಿದ್ದ ಡಿಜಿಟಲ್ ನೇಮ್ ಬೋರ್ಡ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಪ್ರಯಾಣಿಕರು ಗಾಬರಿಗೊಂಡರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಡಿಜಿಟಲ್ ನೇಮ್ ಬೋರ್ಡ್ ಹೊತ್ತಿ ಉರಿದಿದೆ ಎನ್ನಲಾಗಿದೆ. ವೀಕೆಂಡ್ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದ ಸಮಯದಲ್ಲೇ ಈ ಘಟನೆ ನಡೆದಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಕೆಲವರು ಆತಂಕದಿಂದ ಓಡಾಟ ನಡೆಸಿದರು.
ನಿಲ್ದಾಣದಲ್ಲಿ ಹೊಗೆ ಆವರಿಸಿದ್ದರಿಂದ ಪ್ರಯಾಣಿಕರಲ್ಲಿ ಕೆಲಕಾಲ ಭಯದ ವಾತಾವರಣ ಉಂಟಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಮೆಟ್ರೋ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಬೆಂಕಿ ಕಾಣಿಸಿಕೊಂಡ ಕಾರಣಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ವೀಕೆಂಡ್‌ನಲ್ಲೇ ಜನಸಂದಣಿ ಹೆಚ್ಚಿರುವ ಸಮಯದಲ್ಲಿ ಸಂಭವಿಸಿದ ಈ ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದು, ಕೆಲಕಾಲ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿತು.



















