ಬೆಂಗಳೂರು : ನಗರದ ಬಾಗಲೂರಿನ ಬಂಡಿಕೊಡಿಗೆಹಳ್ಳಿಯಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಕಾಂಪೌಂಡ್ ಗೋಡೆ ಕುಸಿದು 5 ವರ್ಷದ ಮಗು ಮೃತಪಟ್ಟಿದೆ. ಮತ್ತೋರ್ವ ಬಾಲಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಮೃತ ಮಗುವನ್ನು ಅಫೀನ್ (5) ಎಂದು ಗುರುತಿಸಲಾಗಿದೆ. ಗಾಯಗೊಂಡ ಬಾಲಕಿ ಸಮನ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.
ನಿನ್ನೆ ಸಂಜೆ ಸುಮಾರು 6.30ರ ವೇಳೆಗೆ ಈ ಅವಘಡ ಸಂಭವಿಸಿದೆ. ಮನೆಯ ಕಾಂಪೌಂಡ್ ಗೇಟ್ ಸಮೀಪ ಮೂವರು ಮಕ್ಕಳು ಆಟವಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಕಾಂಪೌಂಡ್ ಗೋಡೆ ಮೊದಲೇ ಬಿರುಕು ಬಿಟ್ಟ ಸ್ಥಿತಿಯಲ್ಲಿತ್ತು. ಇದರಿಂದ ಗೋಡೆ ದುರ್ಬಲಗೊಂಡಿದ್ದು, ಏಕಾಏಕಿ ಕುಸಿದಿದೆ ಎನ್ನಲಾಗಿದೆ.
ಗೋಡೆ ಕುಸಿದ ಪರಿಣಾಮ ಅಫೀನ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಮತ್ತೊಂದೆಡೆ ಸಮನ್ವಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ಮತ್ತೆ ಕೋಮು ಸಂಘರ್ಷ : ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ



















