ಬೆಂಗಳೂರು : ಚಿನ್ನಯ್ಯನ ಜೊತೆಗೆ ನಾನು ಮಾತನಾಡಿದ್ದು ನಿಜ, ಆತ ನನ್ನೊಂದಿಗೆ ತಮಿಳಿನಲ್ಲಿ ಮಾತನಾಡಿದ್ದ ಎಂದು ನಟ ಪ್ರಕಾಶ್ ರಾಜ್ ಒಪ್ಪಿಕೊಂಡಿದ್ದಾರೆ.
ಬೆಂಗಳೂರಿನ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ತನ್ನ ಹೆಸರು ತಳುಕು ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ದೇಶದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಪ್ರಶ್ನೆ ಮಾಡುತ್ತೇನೆ. ಬಿಜೆಪಿ ವಿರುದ್ಧ ಮಾತನಾಡುತ್ತೇನೆ ಎಂಬ ಒಂದೇ ಕಾರಣಕ್ಕೆ, ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರದ ಪ್ರಕರಣದಲ್ಲಿ ನನ್ನ ಹೆಸರನ್ನು ಯಾಕೆ ತಳುಕು ಹಾಕಲಾಗುತ್ತಿದೆ’. ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
ಚಿನ್ನಯ್ಯ ಫೋನ್ ಮಾಡಿದ್ದು ನಿಜ. ಅದರೆ ಆ ಸಂದರ್ಭದಲ್ಲಿ ನಾನು ಅವನಿಗೆ ಫೋನ್‌ನಲ್ಲಿ ಮಾತನಾಡಬೇಡ, ನಿನ್ನ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸು ಎಂದಿದ್ದೆ. ಚಿನ್ನಯ್ಯ ವಾಯ್ಸ್ ರೆಕಾರ್ಡ್ ಮಾಡಿ ಕಳಿಸಿದ ಕೂಡಲೇ ನಾನು ಎಸ್ ಐ ಟಿ ಮುಖ್ಯಸ್ಥರಾದ ಮೊಹಾಂತಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆ. ಹಾಗೂ ಚಿನ್ನಯ್ಯ ಕಳಿಸಿದ್ದ ವಾಯ್ಸ್ ಮೆಸೇಜನ್ನು ಪೊಲೀಸರಿಗೆ ಕಳಿಸಿಕೊಟ್ಟೆ’ ಎಂದು ತಿಳಿಸಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಕಡೆಯಿಂದ ಅಂದು ನನಗೆ ಒಂದು ಫೋನ್ ಕರೆ ಬಂದಿತ್ತು. ‘ಮಾಸ್ಕ್ ಮ್ಯಾನ್’ ನಿಮ್ಮ ಹತ್ತಿರ ಮಾತನಾಡಬೇಕಂತೆ ಎಂದು ಹೇಳಿದ್ದರು. ಬಳಿಕ ಮಾಸ್ಕ್ ಮ್ಯಾನ್ ನನ್ನ ಜೊತೆಗೆ ತಮಿಳಿನಲ್ಲಿ ಮಾತನಾಡಲು ಶುರು ಮಾಡಿದ. ‘ಅಣ್ಣ ನನಗೆ ಬಹಳ ವಿಷಯ ಗೊತ್ತು! ನಾನು ನಿಮ್ಮನ್ನು ಭೇಟಿ ಆಗಬೇಕು ಮತ್ತು ಸಾಕಷ್ಟು ವಿಚಾರಗಳನ್ನು ಹೇಳಿಕೊಳ್ಳಬೇಕು. ನನಗೆ ಭಯ ಆಗ್ತಾ ಇದೆ, ನಿಮ್ಮ ಬೆಂಬಲ ಬೇಕು’ ಎಂದು ಕೇಳಿಕೊಂಡಿದ್ದ ಎಂದು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ.
ಈ ವೇಳೆ ಅದಕ್ಕೆ ಪ್ರತಿಕ್ರಿಯೆ ನೀಡಿ, ‘ನೀನು ನನ್ನ ಮುಂದೆ ಹೇಳಿದ ಸತ್ಯವನ್ನೆಲ್ಲಾ ಎಸ್‌ಐಟಿ ಅಧಿಕಾರಿಗಳ ಮುಂದೆ ಹೋಗಿ ಹೇಳು ಎಂದಿದ್ದೆ. ಅಲ್ಲದೆ, ಸತ್ಯ ಹೇಳಿದರೆ ಊರೇ ನಿನ್ನನ್ನು ಕೊಂಡಾಡುತ್ತೆ ಹಾಗೂ ನಾನು ಕೂಡಾ ನಿನ್ನನ್ನು ತಬ್ಬಿಕೊಳ್ಳುತ್ತೇನೆ ಎಂದು ಹೇಳಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಕೆಲವು ದಿನಗಳ ಬಳಿಕ ಎಸ್ ಐ ಟಿ ಮುಖ್ಯಸ್ಥ ಮೊಹಾಂತಿ ಅವರ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಳಿದಾಗ, ‘ಚಿನ್ನಯ್ಯನಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದರು. ‘ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ, ಆತ ಸುಳ್ಳು ಮಾಹಿತಿ ನೀಡುತ್ತಿದ್ದಾನೆ, ಅವನಿಂದ ದೂರ ಇರಿ’ ಎಂದು ಎಚ್ಚರಿಸಿದ್ದರು. ಈ ಕಾರಣದಿಂದಾಗಿ ನಾನು ಅವನಿಂದ ತಕ್ಷಣ ದೂರ ಆದೆ’ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು 200 ಕೋಟಿ ಡೀಲ್ ಪ್ರಕಾಶ್ ರಾಜ್ ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಆದರೆ 200 ಕೋಟಿ ರೂಪಾಯಿ ಹಣವನ್ನು ನಾನೆಲ್ಲಿಂದ ತರಲಿ? ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ವಿಷಯವನ್ನು ತಿರುಚಿ ನನಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ನಾನು ಧರ್ಮ ವಿರೋಧಿ ಅಂತೆಲ್ಲಾ ಯಾಕೆ ಬಣ್ಣ ಬಳಿಯುತ್ತಿದ್ದೀರಾ? ನಾನು ಎಲ್ಲರ ಭಾವನೆಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ರೈತರೇ ಗಮನಿಸಿ.. 3 ದಿನದಲ್ಲಿ ಪಿಎಂ ಕಿಸಾನ್ ಯೋಜನೆಯ ಹಣ ಜಮೆ : ಮೊದಲು ಈ ಕೆಲಸ ಮಾಡಿ



















