ಬೆಂಗಳೂರು : ನಗರದ ಹೆಬ್ಬಾಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೈಡ್ರೋ ಗಾಂಜಾ ಡೀಲಿಂಗ್‌ನಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಇಮ್ರಾನ್ ಪಾಷಾ ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ಆರೋಪಿ ಮಹಾರಾಷ್ಟ್ರದ ನಾಸಿಕ್‌ನಿಂದ ಹೈಡ್ರೋ ಗಾಂಜಾವನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಹೆಬ್ಬಾಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಇಮ್ರಾನ್ ಪಾಷಾ ವಿರುದ್ಧ ಈ ಹಿಂದೆಯೂ ವಿವಿಧ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಯ ಚಟುವಟಿಕೆಗಳ ಕುರಿತು ಪೊಲೀಸರು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.
ಕಾರ್ಯಾಚರಣೆಯ ವೇಳೆ ಆರೋಪಿಯಿಂದ ಸುಮಾರು 3 ಕೆಜಿ 180 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಮಾದಕ ವಸ್ತುವಿನ ಅಂದಾಜು ಮೌಲ್ಯ ಸುಮಾರು ₹2.20 ಕೋಟಿ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ ಪೊಲೀಸರು, ಡ್ರಗ್ ಜಾಲದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಅಪಘಾತದಲ್ಲಿ ಸಾವು, ಆದ್ರೆ ಯಾರು ಈ ವ್ಯಕ್ತಿ? ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾದ ಕೇಸ್!



















