ಛತ್ರಪತಿ ಸಂಭಾಜಿನಗರ : ಆಸ್ತಿ ವಿವಾದ ಸಂಬಂಧ ತಂದೆಯ ವಿರುದ್ಧ ಹೂಡಿದ್ದ ಕಾನೂನು ಹೋರಾಟದಲ್ಲಿ ಸೋತ ಮಗನೊಬ್ಬ, ರಸ್ತೆಯಲ್ಲೇ ತಂದೆಯನ್ನು ಭೀಕರವಾಗಿ ಇರಿದು ಕೊಂದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಮೃತರನ್ನು 82 ವರ್ಷದ ಜಾಫರ್ ಕಮರುದ್ದೀನ್ ಸಯ್ಯದ್ ಪಟೇಲ್ ಎಂದು ಗುರುತಿಸಲಾಗಿದೆ. ನ್ಯಾಯಾಲಯದಲ್ಲಿ ತಂದೆಯ ಪರವಾಗಿ ತೀರ್ಪು ಬಂದ ಬೆನ್ನಲ್ಲೇ ಆಕ್ರೋಶಗೊಂಡ ಮಗ ಅಬ್ದುಲ್ ರೆಹಮಾನ್ ಅಬ್ದುಲ್ ಜಾಫರ್ ಸಾರ್ವಜನಿಕರ ಕಣ್ಣೆದುರೇ ಈ ಕ್ರೂರ ಕೃತ್ಯ ಎಸಗಿದ್ದಾನೆ.
ಮೃತರಾದ ಜಾಫರ್ ಪಟೇಲ್ ಅವರು ಜಲಸಂಪನ್ಮೂಲ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದರು. ಮೆಡಿಕಲ್ ರೆಪ್ (Medical Representative) ಆಗಿ ಕೆಲಸ ಮಾಡುತ್ತಿರುವ ಮಗ ಅಬ್ದುಲ್ ರೆಹಮಾನ್, ಪ್ರತಿದಿನ ಮನೆಯಲ್ಲಿ ಜಗಳ ತೆಗೆದು ಪೋಷಕರ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಮಗನ ನಿರಂತರ ಕಿರುಕುಳ ಮತ್ತು ನಿಂದನಾತ್ಮಕ ವರ್ತನೆಯಿಂದ ಬೇಸತ್ತಿದ್ದ ವೃದ್ಧ ತಂದೆ, ಪುಣೆಯಲ್ಲಿದ್ದ ತಮ್ಮ ಮಗಳ ಮನೆಗೆ ವಾಸ್ತವ್ಯ ಬದಲಿಸಿದ್ದರು. ತರುವಾಯ, ತಮಗೆ ಸೇರಿದ ಮನೆಯಿಂದ ಮಗನನ್ನು ಹೊರಹಾಕಲು ಮತ್ತು ಹಕ್ಕು ಮರಳಿ ಪಡೆಯಲು ಜಾಫರ್ ಅವರು ನ್ಯಾಯಾಲಯದಲ್ಲಿ ಎರಡು ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.
ಕೋರ್ಟ್‌ನಿಂದ ವಾಪಸಾಗುವಾಗ ದಿಢೀರ್ ದಾಳಿ
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವೃದ್ಧ ತಂದೆಯ ಪರವಾಗಿ ತೀರ್ಪು ನೀಡಿತ್ತು. ಮಗನನ್ನು ಮನೆಯಿಂದ ತಕ್ಷಣವೇ ತೆರವುಗೊಳಿಸುವಂತೆ ಆದೇಶಿಸಿ, ಮಾಲೀಕತ್ವವನ್ನು ತಂದೆಗೆ ಹಸ್ತಾಂತರಿಸಿತ್ತು. ಕೋರ್ಟ್ ನೀಡಿದ ಇಲಾಖಾ ಆದೇಶದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಜಾಫರ್ ಪಟೇಲ್ ಅವರು ತಮ್ಮ ಮಗಳೊಂದಿಗೆ ಆಟೋರಿಕ್ಷಾದಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ರಸ್ತೆಯಲ್ಲೇ ಆಟೋವನ್ನು ತಡೆದ ಮಗ ಅಬ್ದುಲ್ ರೆಹಮಾನ್, ತಂದೆಯ ಮೇಲೆ ಏಕಾಏಕಿ ಮುಗಿಬಿದ್ದಿದ್ದಾನೆ.
ತಂದೆಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಸಾರ್ವಜನಿಕರ ಸಮ್ಮುಖದಲ್ಲೇ ಈ ಕೃತ್ಯ ನಡೆದಿದ್ದು, ವೃದ್ಧ ಜಾಫರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾರೆ. ವೃದ್ಧ ತಂದೆಯನ್ನು ರಕ್ಷಿಸಲು ಮುಂದಾದ ಜಾಫರ್ ಅವರ ಮಗಳ ಮೇಲೂ ಆರೋಪಿ ದಾಳಿ ನಡೆಸಿದ್ದು, ಆಕೆಗೂ ಗಾಯಗಳಾಗಿವೆ. ತೀವ್ರ ರಕ್ತಸ್ರಾವದಿಂದಾಗಿ ವೃದ್ಧ ಜಾಫರ್ ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆತ್ತ ತಂದೆಯನ್ನೇ ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಮಗ ಅಬ್ದುಲ್ ರೆಹಮಾನ್‌ನನ್ನು ಪೊಲೀಸರು ವಶಕ್ಕೆ ಪಡೆದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯು ಆ ಪ್ರದೇಶವನ್ನು ಬೆಚ್ಚಿಬೀಳಿಸಿದೆ.
ಇದನ್ನೂ ಓದಿ : 2 ಕೋಟಿ ವಿಮೆ ಹಣಕ್ಕಾಗಿ ಪತ್ನಿಯಿಂದಲೇ ಮಾಜಿ ಸೈನಿಕನ ಕೊಲೆ? ಆಸ್ಪತ್ರೆಯಲ್ಲೇ ವಿಷ ನೀಡಿ ಹತ್ಯೆ ಶಂಕೆ!



















