ಚಿತ್ರದುರ್ಗ : ಜಿಲ್ಲೆಯ ಹೊಳಲ್ಕೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಭೇದಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟಂತೆ ಬಿಂಬಿಸಲು ಯತ್ನಿಸಿದ್ದ ಪ್ರಕರಣದ ಹಿಂದೆ ಇನ್ಶೂರೆನ್ಸ್ ಹಣಕ್ಕಾಗಿ ನಡೆದ ಸಂಚು ಬಯಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮೃತ ಮಹಿಳೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಂ.ಸಿ. ಹಳ್ಳಿಯ ಸುಮಿತ್ರಾ (48) ಎಂದು ಗುರುತಿಸಲಾಗಿದೆ. ಆರೋಪಿ ದೇವಕುಮಾರ್ ಮತ್ತು ಸುಮಿತ್ರಾ ನಡುವೆ ಕಳೆದ ಐದು ವರ್ಷಗಳಿಂದ ಅನೈತಿಕ ಸಂಬಂಧ ಇತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಐದು ವರ್ಷಗಳ ಹಿಂದೆ ದೇವಕುಮಾರ್ ಸುಮಿತ್ರಾ ಹೆಸರಿನಲ್ಲಿ ಅಪಘಾತ ವಿಮೆ ಮಾಡಿಸಿದ್ದ. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ನಿರಂತರ ಜಗಳಗಳು ನಡೆಯುತ್ತಿದ್ದು, ಇದೇ ವೇಳೆ ದೇವಕುಮಾರ್ 15 ಲಕ್ಷ ರೂಪಾಯಿ ವಿಮೆ ಹಣ ಪಡೆಯುವ ಉದ್ದೇಶದಿಂದ ಕೊಲೆ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ.
ದೇವಕುಮಾರ್, ದಿಲೀಪ್ ಕುಮಾರ್ ಹಾಗೂ ಭರತ್ ಸೇರಿ ಸುಮಿತ್ರಾಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಕೊಲೆ ಪ್ರಕರಣವನ್ನು ಅಪಘಾತ ಎಂದು ಬಿಂಬಿಸಲು ಶವವನ್ನು ಹೆದ್ದಾರಿ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದರು ಎನ್ನಲಾಗಿದೆ.
ಹೆದ್ದಾರಿ ಪಕ್ಕದಲ್ಲಿ ಶವ ಪತ್ತೆಯಾದ ತಕ್ಷಣ ಹೊಳಲ್ಕೆರೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಪ್ರಕರಣದ ಸುಳಿವುಗಳನ್ನು ಆಧರಿಸಿ ಸಿಪಿಐ ಶ್ರೀಶೈಲ ಹಾಗೂ ಪಿಎಸ್‌ಐ ಸಚ್ಚಿನ್ ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳ ಜಾಡು ಹಿಡಿದಿದೆ.
ಇದೀಗ ಪ್ರಕರಣ ಸಂಬಂಧ ಪ್ರಮುಖ ಆರೋಪಿ ದೇವಕುಮಾರ್ ಹಾಗೂ ದಿಲೀಪ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಇಬ್ಬರೂ ಚಿಕ್ಕಮಗಳೂರು ಜಿಲ್ಲೆಯ ಮೂಲದವರಾಗಿದ್ದಾರೆ. ಮತ್ತೊಬ್ಬ ಆರೋಪಿ ಭರತ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಸದ ಟೆಂಡರ್‌ನಿಂದ ಗೃಹಲಕ್ಷ್ಮಿವರೆಗೆ – ಡಿಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್!



















