ನವದೆಹಲಿ : ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕರಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಜೂನ್ 18ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯ ಹೊಸ್ತಿಲಲ್ಲೇ ಈ ಬೆಳವಣಿಗೆ ನಡೆದಿದ್ದು, ತುರ್ತು ವಿಚಾರಣೆ ನಡೆಸುವಂತೆ ಕಾಂಗ್ರೆಸ್ ಗುರುವಾರ ನ್ಯಾಯಾಲಯದ ರಜಾಕಾಲದ ಪೀಠದ ಮುಂದೆ ಮನವಿ ಮಾಡಲಿದೆ. ಈ ಕಾನೂನು ಹೋರಾಟವು ಮಧ್ಯಪ್ರದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ನಾಮಪತ್ರ ತಿರಸ್ಕಾರಕ್ಕೆ ಕಾರಣವಾದ ತೇಲಂಗಾಣ ಪ್ರಕರಣ
ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರಕ್ಕೆ ಸಂಬಂಧಿಸಿ ಬಿಜೆಪಿ ಸಲ್ಲಿಸಿದ ಆಕ್ಷೇಪಣೆಯನ್ನು ಪುರಸ್ಕರಿಸಿದ್ದ ಚುನಾವಣಾಧಿಕಾರಿಗಳು ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಇತ್ತೀಚೆಗೆ ತಿರಸ್ಕರಿಸಿದ್ದರು. ನಟರಾಜನ್ ಅವರು ತಮ್ಮ ನಾಮಪತ್ರದ ಅಫಿಡವಿಟ್‌ನಲ್ಲಿ ತೆಲಂಗಾಣದಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಯೊಂದರ ವಿವರಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಪ್ರಮುಖ ಸತ್ಯಗಳನ್ನು ಮರೆಮಾಚಿರುವುದು ಚುನಾವಣಾ ನಿಯಮಗಳ ಉಲ್ಲಂಘನೆಯಾಗಿದ್ದು, ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿತ್ತು.
ಕಾಂಗ್ರೆಸ್ ನಿಯೋಗದಿಂದ ಚುನಾವಣಾ ಆಯೋಗಕ್ಕೆ ಮನವಿ
ನಾಮಪತ್ರ ತಿರಸ್ಕಾರದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಜೈರಾಮ್ ರಮೇಶ್, ಅಭಿಷೇಕ್ ಮನು ಸಿಂಘ್ವಿ ಮತ್ತು ಸ್ವತಃ ಮೀನಾಕ್ಷಿ ನಟರಾಜನ್ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ಬುಧವಾರ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿತ್ತು. ಚುನಾವಣಾಧಿಕಾರಿಯ ನಿರ್ಧಾರವನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ ನಾಯಕರು, ತೆಲಂಗಾಣದ ಪ್ರಕರಣವು ಕೇವಲ ಕೋರ್ಟ್ ನೋಟಿಸ್ ಆಗಿದೆಯೇ ಹೊರತು ಅದು ಕ್ರಿಮಿನಲ್ ಮೊಕದ್ದಮೆಯಲ್ಲ. ಕೇವಲ ನ್ಯಾಯಾಲಯದ ನೋಟಿಸ್‌ಗಳನ್ನು ಅಫಿಡವಿಟ್‌ನಲ್ಲಿ ನಮೂದಿಸುವ ಅಗತ್ಯವಿಲ್ಲ ಎಂದೂ ವಾದಿಸಿದ್ದರು.
ಸಿಂಘ್ವಿ ಸ್ಪಷ್ಟನೆ
ಕಾಂಗ್ರೆಸ್ ಪರವಾಗಿ ವಾದ ಮಂಡಿಸಿರುವ ಹಿರಿಯ ವಕೀಲ ಹಾಗೂ ಸಂಸದ ಅಭಿಷೇಕ್ ಮನು ಸಿಂಘ್ವಿ, ಮೀನಾಕ್ಷಿ ನಟರಾಜನ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕಾನೂನು ಪ್ರಕ್ರಿಯೆಗಳು ಜಾರಿಯಲ್ಲಿಲ್ಲ. ಬಿಜೆಪಿ ಉಲ್ಲೇಖಿಸುತ್ತಿರುವ ಪ್ರಕರಣವನ್ನು ಯಾವುದೇ ಸಮರ್ಥ ನ್ಯಾಯಾಲಯವು ಇನ್ನೂ ಅಧಿಕೃತವಾಗಿ ಪರಿಗಣನೆಗೆ (Cognisance) ತೆಗೆದುಕೊಂಡಿಲ್ಲ. ಹೀಗಿರುವಾಗ ಕಾನೂನುಬದ್ಧವಾಗಿ ಅಸ್ತಿತ್ವದಲ್ಲೇ ಇಲ್ಲದ ಪ್ರಕರಣವನ್ನು ಅಫಿಡವಿಟ್‌ನಲ್ಲಿ ಸುಳ್ಳು ಎಂದು ಬಿಂಬಿಸಿ ನಾಮಪತ್ರ ತಿರಸ್ಕರಿಸಿರುವುದು ಕಾನೂನುಬಾಹಿರ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಖ್ಯಾಬಲದ ಲೆಕ್ಕಾಚಾರ
230 ಸದಸ್ಯರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ ಬಿಜೆಪಿ 164 ಶಾಸಕರನ್ನು ಹೊಂದಿದ್ದು, ಮೊದಲ ಎರಡು ರಾಜ್ಯಸಭಾ ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಆದರೆ, ಮೂರನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಪಕ್ಷವು ಒಟ್ಟು 63 ಶಾಸಕರನ್ನು ಹೊಂದಿದ್ದರೂ, ಇಬ್ಬರು ಶಾಸಕರಾದ ರಾಜೇಂದ್ರ ಭಾರತಿ ಮತ್ತು ಮುಖೇಶ್ ಮಲ್ಹೋತ್ರಾ ಮತದಾನದ ಅರ್ಹತೆ ಕಳೆದುಕೊಂಡಿರುವುದರಿಂದ ಕಾಂಗ್ರೆಸ್‌ನ ಪರಿಣಾಮಕಾರಿ ಸಂಖ್ಯಾಬಲ 61 ಕ್ಕೆ ಕುಸಿದಿದೆ. ಈ ಜಿದ್ದಾಜಿದ್ದಿನ ನಡುವೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರದ ಭವಿಷ್ಯ ಈಗ ಸುಪ್ರೀಂ ಕೋರ್ಟ್‌ನ ನಿರ್ಧಾರದ ಮೇಲೆ ನಿಂತಿದ್ದು, ಮುಂದಿನ ವಾರ ನಡೆಯಲಿರುವ ಚುನಾವಣೆಯ ಫಲಿತಾಂಶದ ಮೇಲೆ ಇದು ಭಾರಿ ಪ್ರಭಾವ ಬೀರಲಿದೆ.
ಇದನ್ನೂ ಓದಿ : ಚುನಾವಣಾ ಅಫಿಡವಿಟ್‌ನಲ್ಲಿ ಮಾಹಿತಿ ಮರೆಮಾಚಿದ ಆರೋಪ – ಖರ್ಗೆ ವಿರುದ್ಧ ತನಿಖೆಗೆ ದಿನೇಶ್ ಕಲ್ಲಹಳ್ಳಿ ಆಗ್ರಹ!



















