ಹಾಸನ : ಹಲ್ಲಿ ಬಿದ್ದ ಸಾಂಬಾರ್‌ನಲ್ಲಿ ಊಟ ಸೇವನೆ ಮಾಡಿದ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಹಾಸನದ ಸಾರಾಪುರದಲ್ಲಿರುವ ಕೃಷಿ ವಿಜ್ಞಾನ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ.
ಬುಧವಾರ ರಾತ್ರಿ ಊಟ ಮಾಡುವಾಗ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆಯಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಆರು ವಿದ್ಯಾರ್ಥಿಗಳಿಗೆ ಹಾಸನದ ಹಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಲಿಂಡರ್ ಕೊರತೆಯಿಂದ ಹೊರಗೆ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿರುವುದರಿಂದ ಅಚಾತುರ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಸುಮಾರು 400 ವಿದ್ಯಾರ್ಥಿನಿಯರು ಇರುವ ಹಾಸ್ಟಲ್‌ಗೆ ಸಿಲಿಂಡರ್ ಸಿಗದೆ ಸಂಕಷ್ಟ ಎದುರಾಗಿದೆ. ವಾರಕ್ಕೆ ನಾಲ್ಕರಿಂದ ಆರು ವಾಣಿಜ್ಯ ಸಿಲಿಂಡರ್ ಅವಶ್ಯಕತೆ ಇದ್ದು, ಗ್ಯಾಸ್ ಏಜೆನ್ಸಿ ವಾರಕ್ಕೆ ಕೇವಲ ಒಂದು, ಎರಡು ಸಿಲಿಂಡರ್ ನೀಡುತ್ತಿದೆ. ಸಿಲಿಂಡರ್ ಸಿಗದೆ ಅಡುಗೆ ಮನೆಯ ಹೊರಗೆ ಸೌದೆ ಒಲೆಯಲ್ಲಿ ಅಡುಗೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಇದೇ ಕಾರಣದಿಂದ ಅಡುಗೆ ಮನೆಯಲ್ಲಿ ಶುಚಿತ್ವ ಇಲ್ಲದೇ ಹಲ್ಲಿ ಬಿದ್ದ ಆಹಾರ ಸೇವನೆ ಮಾಡಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಹಿಮ್ಸ್ಗೆ ಡಿಹೆಚ್‌ಓ ಅನಿಲ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಕಾಣೆಯಾಗಿದ್ದ 7 ವರ್ಷದ ಬಾಲಕ ಶವವಾಗಿ ಪತ್ತೆ – ಕೊಲೆ ಶಂಕೆ!


















