ಬೆಂಗಳೂರು : ನೀವೇನಾದರೂ ಬುಧವಾರ (ಜೂನ್ 10) ಚಿನ್ನ ಖರೀದಿಸಬೇಕು ಎಂದು ಬಯಸಿದ್ದರೆ, ನಿಮಗೆ ಇಂದು ಚಿನ್ನದಂತಹ ದಿನ. ಏಕೆಂದರೆ, ಬುಧವಾರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಹೌದು, ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 430 ರೂಪಾಯಿ ಇಳಿಕೆಯಾಗಿದೆ. ಇದೇ ರೀತಿ, 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 395 ರೂಪಾಯಿ ಇಳಿಕೆಯಾಗಿದ್ದು, ಖರೀದಿಸುವವರಿಗೆ ಸಿಹಿ ಸುದ್ದಿ ದೊರೆತಂತಾಗಿದೆ.
ಇದರೊಂದಿಗೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆಯು 14,886 ರೂಪಾಯಿ ಆಗಿದೆ. ಕಳೆದ ಕೆಲ ತಿಂಗಳಲ್ಲಿಯೇ ಇದೇ ಮೊದಲ ಬಾರಿಗೆ ಚಿನ್ನದ ಬೆಲೆಯು 15 ಸಾವಿರ ರೂ.ಗಿಂತ ಕಡಿಮೆಯಾಗಿದೆ. ಇನ್ನು, 22 ಕ್ಯಾರೆಟ್ ನ ಚಿನ್ನದ ಬೆಲೆಯು ಬುಧವಾರದ ಇಳಿಕೆಯ ನಂತರ 1 ಗ್ರಾಂಗೆ 13,645 ರೂಪಾಯಿ ಆಗಿದೆ. ಇಲ್ಲೂ ಕೂಡ ಕೆಲ ತಿಂಗಳ ಬಳಿಕ 22 ಕ್ಯಾರೆಟ್ ಚಿನ್ನವು 1 ಗ್ರಾಂಗೆ 14 ಸಾವಿರ ರೂ.ಗಿಂತ ಕಡಿಮೆಯಾಗಿದೆ.
ಬೆಳ್ಳಿ ಧಾರಣೆಯಲ್ಲೂ ಭಾರಿ ಇಳಿಕೆ
ಚಿನ್ನ ಮಾತ್ರವಲ್ಲ, ಬೆಳ್ಳಿಯ ಬೆಲೆಯೂ ಬುಧವಾರ ಇಳಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಒಂದು ಕೆ.ಜಿ ಬೆಳ್ಳಿ ಬೆಲೆಯು 2.5 ಲಕ್ಷ ರೂಪಾಯಿಗೆ ಇಳಿಕೆಯಾದಂತಾಗಿದೆ. ಬೆಳ್ಳಿ ಖರೀದಿಸುವವರಿಗೆ ಕೂಡ ಇದು ಶುಭ ಸಮಾಚಾರ ಎನಿಸಿದೆ.
ಕಳೆದ ಆರು ದಿನಗಳಲ್ಲಿ ಬೆಳ್ಳಿಯ ಬೆಲೆಯಲ್ಲಿ ನಾಲ್ಕು ಬಾರಿ ಇಳಿಕೆಯಾಗಿದೆ. ಅಂದರೆ, ಒಟ್ಟು 30 ಸಾವಿರ ರೂಪಾಯಿ ಇಳಿಕೆಯಾದಂತಾಗಿದೆ. ಬಂಗಾರ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ ಕಾರಣ ಖರೀದಿ ಪ್ರಮಾಣವು ಭಾರಿ ಇಳಿಕೆಯಾಗಿದೆ. ಇದರಿಂದಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಜಾಗತಿಕ ಮಾರುಕಟ್ಟೆಯೂ ಏರಿಳಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ : ದೆಹಲಿ ಪೊಲೀಸರ ಸೋಗಲ್ಲಿ ಬೆಂಗಳೂರಿನ ವೃದ್ಧೆಗೆ ಡಿಜಿಟಲ್ ಅರೆಸ್ಟ್ – 98.40 ಲಕ್ಷ ಪೀಕಿದ ಸೈಬರ್ ಚೋರರು!


















