ಹೈದರಾಬಾದ್ : ಭಾಗ್ಯನಗರದ ಪ್ರತಿಷ್ಠಿತ ಐಟಿ ಹಬ್ ಹಾಗೂ ಸೈಬರಾಬಾದ್ ವ್ಯಾಪ್ತಿಯ ಕೂಕಟ್‌ಪಲ್ಲಿಯ ಜನಪ್ರಿಯ ಪಬ್ ಒಂದರ ಮೇಲೆ ಭಾನುವಾರ ಮುಂಜಾನೆ ಸೈಬರಾಬಾದ್ ಪೊಲೀಸರು ಯುವ ಮಹಿಳಾ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ರಹಸ್ಯ ಕಾರ್ಯಾಚರಣೆಯಲ್ಲಿ, ಪಬ್ ಹೆಸರಿನಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು ಹಾಗೂ ನಿಯಮಬಾಹಿರ ಕೃತ್ಯಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದ್ದು, ಕೊನೆಗೆ ಆ ಪಬ್‌ಗೆ ಬೀಗ ಜಡಿಯಲಾಗಿದೆ.
ಕೂಕಟ್‌ಪಲ್ಲಿಯ ‘ಕಿಂಗ್ಸ್ ಅಂಡ್ ಕ್ವೀನ್ಸ್ ಪಬ್’ (ಸ್ಥಳೀಯವಾಗಿ ಕ್ಲಬ್ ಮಸ್ತಿ ಎಂದು ಪ್ರಸಿದ್ಧಿಯಾಗಿರುವ) ನಲ್ಲಿ ಅನುಮಾನಾಸ್ಪದ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ 2018ರ ಬ್ಯಾಚ್‌ನ ತೆಲಂಗಾಣ ಕೆಡರ್‌ನ ದಕ್ಷಿಣ ವಲಯದ ಡಿಸಿಪಿ ರಿತಿ ರಾಜ್ ಅವರು ಖುದ್ದಾಗಿ ರಹಸ್ಯ ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ಖಾತರಿಪಡಿಸಿಕೊಂಡರು. ತದನಂತರ ತಡರಾತ್ರಿ ತಮ್ಮ ಸಿಬ್ಬಂದಿಯೊಂದಿಗೆ ಪಬ್ ಮೇಲೆ ದಾಳಿ ನಡೆಸಿ ಆಡಳಿತ ಮಂಡಳಿಗೆ ಶಾಕ್ ನೀಡಿದ್ದಾರೆ. ದೆಹಲಿ ನ್ಯಾಷನಲ್ ಲಾ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿನಿಯಾಗಿರುವ ರಿತಿ ರಾಜ್, ಸದ್ಯ ಕೇಂದ್ರ ಸಚಿವರ ಪುತ್ರನ ಮೇಲಿನ ಎಸ್‌ಐಟಿ ತನಿಖೆಯ ನೇತೃತ್ವವನ್ನೂ ವಹಿಸಿಕೊಂಡಿರುವ ದಕ್ಷ ಅಧಿಕಾರಿಯಾಗಿದ್ದಾರೆ.
ಪಬ್‌ನಲ್ಲಿ ಕಾನೂನುಗಳ ಉಲ್ಲಂಘನೆ ಪತ್ತೆ
ಪೊಲೀಸ್ ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ, ಈ ಪಬ್ ಗ್ರಾಹಕರನ್ನು ಆಕರ್ಷಿಸಲು ಮತ್ತು ಅವರಿಂದ ಹೆಚ್ಚಿನ ಹಣ ವಸೂಲಿ ಮಾಡಲು ಮಹಿಳೆಯರನ್ನು ಬಳಸಿಕೊಳ್ಳುತ್ತಿತ್ತು. ಅಲ್ಲದೆ ಗ್ರಾಹಕರಿಗೆ ಅನೈತಿಕ ಚಟುವಟಿಕೆಗಳಿಗಾಗಿ ಮಹಿಳೆಯರನ್ನು ಪೂರೈಸುವ ದಂಧೆಯೂ ಇಲ್ಲಿ ನಡೆಯುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರೊಂದಿಗೆ, ಅಪ್ರಾಪ್ತ ವಯಸ್ಕರಿಗೆ ಮದ್ಯ ಸೇವನೆಗೆ ಅವಕಾಶವುಳ್ಳಂಥ ಪಬ್ ಗೆ ಪ್ರವೇಶ ನೀಡುವುದು, ನಿಗದಿತ ಸಮಯ ಮೀರಿ ಆಹಾರ ಮತ್ತು ಮದ್ಯ ಸರಬರಾಜು ಮಾಡುವುದು ಹಾಗೂ ಕಡ್ಡಾಯವಾಗಿ ಇರಬೇಕಾದ ಪೊಲೀಸ್ ನಿರಾಕ್ಷೇಪಣಾ ಪತ್ರ (NOC) ಇಲ್ಲದೆಯೇ ಈ ಪಬ್ ಕಾರ್ಯಾಚರಣೆ ನಡೆಸುತ್ತಿರುವುದು ದಾಳಿಯ ವೇಳೆ ಪತ್ತೆಯಾಗಿದೆ.
9 ಮಂದಿ ಸಿಬ್ಬಂದಿ ಪೊಲೀಸ್ ವಶಕ್ಕೆ
ಪೊಲೀಸರ ಈ ಮಿಂಚಿನ ದಾಳಿಯ ಸಂದರ್ಭದಲ್ಲಿ ಪಬ್‌ನಲ್ಲಿದ್ದ ನಾಲ್ವರು ಮಹಿಳೆಯರು ಮತ್ತು ಐವರು ಪುರುಷರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಕೆಪಿಎಚ್‌ಬಿ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಈ ಪಬ್ ವಿರುದ್ಧ ಕಳೆದ 2025ರಲ್ಲೂ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಆದಾಗ್ಯೂ ಆಡಳಿತ ಮಂಡಳಿ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದರಿಂದ, ಈಗ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಅನೈತಿಕ ಸಾಗಣೆ ತಡೆ ಕಾಯ್ದೆಯ (PITA) ಅಡಿಯಲ್ಲಿ ಹೊಸದಾಗಿ ಗಂಭೀರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಇದನ್ನೂ ಓದಿ : ಸಿಎಂ ವಿಜಯ್ ಜೊತೆ ಪ್ರಜ್ಞಾನಂದ ಚೆಸ್ ಆಟ : ಗೆದ್ದಿದ್ದು ಯಾರು, ‘ಚೆಕ್‌ಮೇಟ್’ ಇಟ್ಟಿದ್ಯಾರು?


















