ಕಲಬುರಗಿ : ಪೋಕ್ಸೋ ಪ್ರಕರಣದ ಸಂತ್ರಸ್ತೆಯ ತಾಯಿಯಿಂದಲೇ ಲಂಚ ಸ್ವೀಕರಿಸುತ್ತಿದ್ದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ASI) ಹಾಗೂ ಮಹಿಳಾ ಕಾನ್‌ಸ್ಟೆಬಲ್‌ನ್ನು ಲೋಕಾಯುಕ್ತ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳು ಸಂತ್ರಸ್ತೆಯ ತಾಯಿಗೆ ಕಾನೂನು ನೆರವು ನೀಡುವ ನೆಪದಲ್ಲಿ ಲಂಚ ಪಡೆಯುತ್ತಿದ್ದರು ಎನ್ನಲಾಗಿದೆ. ಬಂಧಿತ ಆರೋಪಿಗಳು ಪೋಕ್ಸೋ ಸಂತ್ರಸ್ತೆಯ ತಾಯಿಗೆ ನ್ಯಾಯಾಲಯದಲ್ಲಿ ಕಾನೂನು ನೆರವು ಮತ್ತು ರಕ್ಷಣೆ ಒದಗಿಸುವ ನೆಪವೊಡ್ಡಿ 10,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅಷ್ಟೇ ಅಲ್ಲದೆ, ಈ ಮುಂಚೆಯೇ ಸರ್ಕಾರಿ ಅಭಿಯೋಜಕರ ಶುಲ್ಕ ಎಂದು ಹೇಳಿ ಸಂತ್ರಸ್ತೆಯ ತಾಯಿಯಿಂದ 1,000 ರೂಪಾಯಿ ಹಣವನ್ನು ಪಡೆದಿದ್ದರು ಎಂಬ ಆರೋಪವಿದೆ.
ಪೊಲೀಸರ ಈ ಕಿರುಕುಳದಿಂದ ಬೇಸತ್ತ ಮಹಿಳೆ ತಕ್ಷಣವೇ ಕಲಬುರಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅರುಣ್‌ಕುಮಾರ್ ಮುರಗುಂಡಿ ಹಾಗೂ ಸಿಬ್ಬಂದಿ ವರ್ಗದವರು ಸ್ಟೇಷನ್ ಬಜಾರ್ ಠಾಣೆಯ ಬಳಿ ತೆರಳಿದ್ದರು. ಸಂತ್ರಸ್ತೆಯ ತಾಯಿಯಿಂದ ಮಹಿಳಾ ಕಾನ್‌ಸ್ಟೆಬಲ್ ಜ್ಯೋತಿ 10,000 ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದಂತೆಯೇ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ಆಕೆಯನ್ನು ರೆಡ್‌ಹ್ಯಾಂಡೆಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಇತ್ತ ಲೋಕಾಯುಕ್ತ ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಎಎಸ್‌ಐ ಶಿವಶರಣಪ್ಪ ಠಾಣೆಯಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಲೋಕಾಯುಕ್ತ ಜಾಗೃತ ದಳವು ಆತನನ್ನು ಬೆನ್ನಟ್ಟಿ ಆಳಂದ ತಾಲೂಕಿನ ಕಡಗಂಚಿ ಎಂಬಲ್ಲಿ ಹೆಡೆಮುರಿ ಕಟ್ಟಿದೆ.
ಇದನ್ನೂ ಓದಿ : ಸರ್ಕಾರಿ ಉದ್ಯೋಗ ಕೊಡಿಸುವ ನೆಪವೊಡ್ಡಿ 5.30 ಕೋಟಿ ರೂ. ವಂಚನೆ ; ಅಪ್ಪ-ಮಗಳು ಬಂಧನ



















