ತುಮಕೂರು : ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನ ಮೂಲದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ತುಮಕೂರು ಹಾಗೂ ದಾವಣಗೆರೆಯ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಶೋಕ್ ಕೆ.ವಿ. ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಜೂನ್ 4ರಂದು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಿಪಿಐ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ತುಮಕೂರಿನ ಶ್ರೀರಾಮನಗರ ನಿವಾಸಿ 23 ವರ್ಷದ ಅಲ್ಲಾಭಕಾಶ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತ ಕ್ಯಾತ್ಸಂದ್ರದ ಕಡೆಯಪೇಟೆಯಲ್ಲಿರುವ ಸ್ಟಾರ್ ಮಟನ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಬಂಧಿತನ ಮೊಬೈಲ್ ಫೋನ್ ಪರಿಶೀಲನೆ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ಪಾಕಿಸ್ತಾನ ಮೂಲದ ‘ರಾಣಾ ಭಾಯಿ’ ಎಂಬ ವ್ಯಕ್ತಿಯೊಂದಿಗೆ ಹಿಂದಿ ಭಾಷೆಯಲ್ಲಿ ನಡೆಸಿದ್ದ ಚಾಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಸಂಚು ರೂಪಿಸಲಾಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದ್ದು, ಮುಸ್ಲಿಂ ಯುವಕರನ್ನು ಸಂಘಟಿಸಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಾಭಕಾಶ್ ಜೊತೆ ಸಂಪರ್ಕದಲ್ಲಿದ್ದ ದಾವಣಗೆರೆ ಮೂಲದ 23 ವರ್ಷದ ಜಮೀರ್ ಖಾನ್‌ನನ್ನೂ ಬಂಧಿಸಲಾಗಿದೆ. ಜಮೀರ್ ಖಾನ್ ಗಾರೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಹುಲಿಕಲ್ ಘಾಟಿಯಲ್ಲಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ – ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ


















